ಕುಷ್ಟಗಿ: ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಹುನಗುಂದ ತಾಲ್ಲೂಕಿನ ಬಳಿ ಒಡೆದಿರುವ ಮುಖ್ಯ ಕೊಳವೆ ದುರಸ್ತಿಗೆ
ಎಲ್ ಅಂಡ್ ಟಿ ಕಂಪನಿ ಮುಂದಾಗಿದೆ.
ನಿಡಸನೂರು ಗ್ರಾಮದ ಸೀಮಾಂತರದಲ್ಲಿ ರೈತರ ಜಮೀನಿನಲ್ಲಿ ಮೂರು ಕಡೆಗಳಲ್ಲಿ ಕೊಳವೆಯಲ್ಲಿ ರಂಧ್ರ ಉಂಟಾಗಿದ್ದು, ಅದನ್ನು ಬೆಸೆಯಬೇಕಿದೆ. ಆದರೆ, ಕೊಳವೆಯಲ್ಲಿ ತುಂಬಿರುವ ನೀರನ್ನು ಹೊರಹಾಕಲಾಗುತ್ತಿದೆ. ಬೃಹತ್ ಕೊಳವೆಯಲ್ಲಿ ಬಹಳಷ್ಟು ನೀರು ಸಂಗ್ರಹವಾಗಿದ್ದು, ಸಂಪೂರ್ಣ ನೀರು ಖಾಲಿಯಾಗಲು ಬಹಳಷ್ಟು ಸಮಯ ಹಿಡಿಯುತ್ತದೆ ಎನ್ನಲಾಗಿದೆ.
ಕಳೆದ ಐದು ದಿನಗಳಿಂದಲೂ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಶನಿವಾರ ದುರಸ್ತಿ ಕೆಲಸಕ್ಕೆ ತೆರಳಿದ್ದ ಎಂಜಿನಿಯರ್ ಮತ್ತು ಕೆಲಸಗಾರರ ಮೇಲೆ ಹುನಗುಂದ ತಾಲ್ಲೂಕಿನ ಕೆಲ ಜನರು ಹಲ್ಲೆ ನಡೆಸಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ಸೋಮವಾರ ಪುನಃ ದುರಸ್ತಿ ಕೆಲಸ ಆರಂಭಗೊಂಡಿದ್ದು, ಎಲ್ ಅಂಡ್ ಟಿ ಕಂಪನಿ ಎಂಜಿನಿಯರ್‌ಗಳಿಗೆ ಇಲ್ಲಿಯ ಆರ್‌ಡಬ್ಲ್ಯೂಎಸ್ ಉಪ ವಿಭಾಗದ ಎಇಇ ಸುರೇಶ್ ಸ್ಥಳದಲ್ಲಿಯೇ ಬೀಡು ಬಿಟ್ಟು ದುರಸ್ತಿ ಕೆಲಸಕ್ಕೆ ನೆರವಾಗುತ್ತಿದ್ದಾರೆ. ಕೊಳವೆಯಲ್ಲಿರುವ ನೀರನ್ನು ಎಂಜಿನ್‌ಗಳ ಮೂಲಕ ಖಾಲಿ ಮಾಡಲಾಗುತ್ತಿದೆ. ನೀರು ಬೆಳೆ ಇರುವ ರೈತರ ಹೊಲದಲ್ಲಿ ಹರಿಯುತ್ತಿದೆ. ಹಾಗಾಗಿ ಹಾನಿಯಾಗುವ ಬೆಳೆಗೆ ಪರಿಹಾರ ಒದಗಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದು ಅದಕ್ಕೆ ಎಲ್ ಅಂಡ್ ಟಿ ಕಂಪನಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಆರ್‌ಡಬ್ಲ್ಯೂಎಸ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್,‘ಕೊಳವೆಯಲ್ಲಿ ಬಿರುಕು ಉಂಟಾದ ನಂತರ ದುರಸ್ತಿಗೊಳಿಸಬೇಕಾದರೆ ಅದರಲ್ಲಿನ ನೀರನ್ನು ಖಾಲಿ ಮಾಡಬೇಕು. ಅದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಕುರಿತು ಎಲ್ ಅಂಡ್ ಟಿ ಕಂಪನಿ ಮೊದಲೇ ಮಾಹಿತಿ ನೀಡಿದ್ದರೆ ಸಾರ್ವಜನಿಕ ಪ್ರಕಟಣೆ ನೀಡುತ್ತಿದ್ದೆವು. ಸಮಸ್ಯೆ ಗಮನಕ್ಕೆ ತಾರದೆ ದುರಸ್ತಿಗೆ ತೆರಳಿದ್ದರೂ ರೈತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿಲ್ಲ. ನೀರು ಪೂರೈಕೆಯಾಗದಿದ್ದರೆ ಜನ ನಮ್ಮನ್ನೇ ದೂರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಈ ವಿಷಯದ ಕುರಿತಂತೆ ಸೋಮವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿ ಜಿಲ್ಲಾಡಳಿತದ ಗಮನಸೆಳೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.