ಅಳವಂಡಿ: ವಲಯದ ವ್ಯಾಪ್ತಿಯ ರೈತನೊಬ್ಬ ತನ್ನ ಜಮೀನಿನಲ್ಲಿ ಬಹು ವಾರ್ಷಿಕ ಬೆಳೆಯಾದ ಕರಿಬೇವು ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ.
ಸಮೀಪದ ಚಿಕ್ಕ ಸಿಂದೋಗಿ ಗ್ರಾಮದ ರೈತ ಈರಯ್ಯ ಕಲ್ಲಯ್ಯ ಮಠದ ಅವರು ತಮ್ಮ ಜಮೀನಿನಲ್ಲಿ ಕರಿಬೇವು ಬೆಳೆಯನ್ನು ಬೆಳೆದಿದ್ದಾರೆ. ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ₹ 85 ಸಾವಿರ ಸಹಾಯಧನದಲ್ಲಿ 1200 ಕರಿಬೇವಿನ ಗಿಡಗಳನ್ನು ಒಂದು ವರ್ಷದ ಹಿಂದೆ ನೆಟ್ಟಿದ್ದು, ಕರಿಬೇವಿನ ಗಿಡಗಳಿಂದ ಉತ್ತಮ ಫಸಲು ಹಾಗೂ ಲಾಭ ಪಡೆಯುತ್ತಿದ್ದಾರೆ. ಸಾಲಿನಿಂದ ಸಾಲು 4 ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ 3 ಅಡಿ ಅಂತರ. ಒಟ್ಟು 1200 ಗಿಡಗಳಿವೆ.
ಕರಿಬೇವು ಸಸಿಗಳನ್ನು ತೋಟಗಾರಿಕೆ ಇಲಾಖೆಯಿಂದ ಖರೀದಿಸಿದ್ದಾರೆ. ಮೊದಲು ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಗೂ ಕುರಿಹಿಕ್ಕಿ ಗೊಬ್ಬರ ಹಾಕಿ ಜಮೀನನ್ನು ಹದಗೊಳಿಸಲಾಗಿದೆ. ಸಸಿ ನೆಡಲು ಗುಂಡಿ ತೆಗೆದು ನಾಟಿ ಮಾಡಿದ್ದಾರೆ. ತನ್ನ ಜಮೀನಿನಲ್ಲಿ ಇರುವ ಬೋರ್‌ವೆಲ್ ನೀರಿನಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. 1 ವರ್ಷದ ನಂತರ ಕರಿಬೇವು ಕೊಯ್ಲಿಗೆ ಬರಲಿದ್ದು, ಈರಯ್ಯ ಕಲ್ಲಯ್ಯ ಮಠದ ಅವರು ಕಳೆದ ಒಂದು ವರ್ಷದಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಕರಿಬೇವಿಗೆ ಚಿಕ್ಕಿ ರೋಗ ಬರುವುದು ಸಾಮಾನ್ಯ. ರೋಗ ಆರಂಭವಾದದ್ದು ಗಮನಕ್ಕೆ ಬಂದ ಕೂಡಲೇ ಔಷಧ ಸಿಂಪಡಣೆ ಮಾಡುತ್ತಾರೆ. ಔಷಧ ಸಿಂಪಡಿಸಿದರೆ ರೋಗ ನಿಯಂತ್ರಣವಾಗುತ್ತದೆ. ಪ್ರತಿನಿತ್ಯ ಕರಿಬೇವಿನ ಸೊಪ್ಪು ಕೊಯ್ಲು ಮಾಡುತ್ತಾರೆ. ಕೆಜಿಗೆ 10 ರಿಂದ ₹80 ರವರೆಗೆ ದರ ಸಿಗುತ್ತದೆ. ಮಳೆಗಾಲ, ಬೇಸಿಗೆ ಕಾಲದಲ್ಲಿ ಬೆಲೆ ಕಡಿಮೆ. ಚಳಿಗಾಲದಲ್ಲಿ ಉತ್ತಮ ಬೆಲೆ ಸಿಗಲಿದೆ. ಕೊಪ್ಪಳ, ಮುಂಡರಗಿ, ಗದಗ, ಹುಬ್ಬಳ್ಳಿ ನಗರಗಳಿಗೆ ಮಾರುಕಟ್ಟೆಗೆ ಕರಿಬೇವು ಬೆಳೆಯನ್ನು ಮಾರಾಟಕ್ಕೆ ಕಳುಹಿಸುತ್ತಿದ್ದಾರೆ. ಕೆಲವೊಮ್ಮೆ ವ್ಯಾಪಾರಸ್ಥರೇ ಸ್ಥಳಕ್ಕೆ ಬಂದು ಕರಿಬೇವು ಖರೀದಿಸುತ್ತಿದ್ದಾರೆ.ಇನ್ನೂ ದೊಡ್ಡದಾಗಿ ಗಿಡಗಳು ಬೆಳೆದರೆ ಇಳುವರಿ ಮೂಲಕ ಹೆಚ್ಚು ಆದಾಯ ಸಿಗುವ ಆಶಾಭಾವನೆ ಹೊಂದಿದ್ದಾರೆ.
ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಸಹಾಯಧನ ಪಡೆದು ಆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಿಂದ ಕರಿಬೇವು ಬೆಳೆದಿದ್ದೇನೆ. ಈ ಬೆಳೆಯನ್ನು ನಿರ್ವಹಣೆ ಮಾಡುವುದು ಸುಲಭ. ಬೆಳೆಗೆ ಹನಿ ನೀರಾವರಿ ಮೂಲಕ ನೀರುಣಿಸುದ್ದೇನೆ. ಕಳೆದ ಎರಡು ವರ್ಷದ ಹಿಂದೆ ಕರಿಬೇವು ಸಸಿ ನಾಟಿ ಮಾಡಿದ್ದೆ. ಗೊಬ್ಬರ ಹಾಕಿ ಉತ್ತಮ ಫಸಲು ಬೆಳೆಸಿದ್ದೇನೆ. ಇಳುವರಿ ಕೂಡ ಬಂದಿದೆ. ವರ್ಷಕ್ಕೆ ಖರ್ಚು ತೆಗೆದರೆ ಒಂದೂವರೆ ಲಕ್ಷ ರೂಪಾಯಿ ವರೆಗೂ ಲಾಭ ಪಡೆಯುತ್ತಿದ್ದೇನೆ’ ಎಂದು ಕರಿಬೇವು ಬೆಳೆದ ರೈತ ಈರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ನರೇಗಾ ಯೋಜನೆಯಡಿ ಕರಿಬೇವು ಬೆಳೆದ ರೈತ ಈರಯ್ಯನಿಗೆ ನಮ್ಮ ತೋಟಗಾರಿಕೆ ಇಲಾಖೆ ವತಿಯಿಂದ ₹ 85 ಸಾವಿರ ರೂಪಾಯಿ ಸಹಾಯಧನ ನೀಡಿದ್ದೇವೆ. ಇದಕ್ಕೂ ಮೊದಲು ಸಾವಯುವ ಗೊಬ್ಬರ ಕೂಡ ಉಚಿತವಾಗಿ ನೀಡಿದ್ದೇವೆ. ಕರಿಬೇವು ಉತ್ತಮವಾಗಿ ಬೆಳೆದಿದ್ದು ಉತ್ತಮ ಲಾಭ ಗಳಿಸಿದ್ದು ರೈತರಿಗೆ ಮಾದರಿಯಾಗಿದ್ದಾನೆ.-ಬಸವರಾಜ ರಾಂಪೂರ, ಸಹಾಯಕ ತೋಟಗಾರಿಕೆ ಅಧಿಕಾರಿ
ತೋಟಗಾರಿಕೆ ಇಲಾಖೆಯ ಮೂಲಕ ಸೌಲಭ್ಯಗಳನ್ನು ಪಡೆದುಕೊಂಡು ಹಾಗೂ ಬಹು ವಾರ್ಷಿಕ ಬೆಳೆಯಾದ ಕರಿಬೇವು ಬೆಳೆಯುವ ಮೂಲಕ ಉತ್ತಮ ಲಾಭ ಪಡೆಯುತ್ತಿದ್ದೇನೆ.-ಈರಯ್ಯ ಮಠದ, ಕರಿಬೇವು ಬೆಳೆದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.