ADVERTISEMENT

ಮತಗಟ್ಟೆಗಳ ಕಡೆ ಹೆಜ್ಜೆ ಹಾಕಿದ ಸಿಬ್ಬಂದಿ

ಕನಕಗಿರಿ ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ 141 ಸ್ಥಾನಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 14:29 IST
Last Updated 26 ಡಿಸೆಂಬರ್ 2020, 14:29 IST
ಗ್ರಾಮ ಪಂಚಾಯಿತಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಕನಕಗಿರಿ ಪದವಿ ಪೂರ್ವ ಕಾಲೇಜ್‌ ಆವರಣದಲ್ಲಿ ಚುನಾವಣಾ ಸಾಮಗ್ರಿ ಪರಿಶೀಲಿಸಿದರು
ಗ್ರಾಮ ಪಂಚಾಯಿತಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಕನಕಗಿರಿ ಪದವಿ ಪೂರ್ವ ಕಾಲೇಜ್‌ ಆವರಣದಲ್ಲಿ ಚುನಾವಣಾ ಸಾಮಗ್ರಿ ಪರಿಶೀಲಿಸಿದರು   

ಕನಕಗಿರಿ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಡಿ. 27 (ಭಾನುವಾರ) ನಡೆಯಲಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿರುವ ಮಾಸ್ಟರಿಂಗ್ ಕೇಂದ್ರದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಶನಿವಾರ ಮತದಾನಕ್ಕೆ ಬೇಕಾದ ಸಾಮಗ್ರಿ ಪಡೆದುಕೊಂಡರು.

ತಾಲ್ಲೂಕಿನ ಒಟ್ಟು 11 ಗ್ರಾಮ ಪಂಚಾಯಿತಿಗಳ ಪೈಕಿ ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿಯ 19 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 10 ಗ್ರಾಮ ಪಂಚಾಯಿತಿಗಳ 141 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ.

ADVERTISEMENT

ಕರ್ತವ್ಯಕ್ಕೆ ನೇಮಕಗೊಂಡ ಹಾಗೂ ಕಾಯ್ದಿರಿಸಿದ ಅಧಿಕಾರಿಗಳಿಗೆ ಅನುಕೂಲವಾಗಲಿ ಎಂದು ಪ್ರೌಢ ಶಾಲೆ ಗೋಡೆಗೆ ಸಮಗ್ರ ಮಾಹಿತಿ ಅಂಟಿಸಲಾಗಿತ್ತು.

ಮತದಾರರ ಪಟ್ಟಿ, ಅಭ್ಯರ್ಥಿಗಳ ಚಿಹ್ನೆ, ಮತಪೆಟ್ಟಿಗೆ, ಕೈಪಿಡಿ, ಶಾಹಿ, ಲಕೋಟೆ, ಘೋಷಣೆ ಪತ್ರ ಹಾಗೂ ಕೋವಿಡ್-19 ಸಾಮಗ್ರಿ ಸೇರಿದಂತೆ ಇತರ ಪರಿಕರಗಳನ್ನು ಆಯಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲಿಸಿದರು.

ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ, ತಹಶೀಲ್ದಾರ್ ರವಿ ಅಂಗಡಿ ಹಾಗೂ ಎಂಸಿಸಿ ತಂಡದ ನಾಯಕ ಸೋಮಶೇಖರಗೌಡ ಪಾಟೀಲ ಅವರು ಮತದಾನದ ಸಮಯದಲ್ಲಿ ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳ ಕುರಿತು ತಿಳಿಸಿದರು.

ಊಟದ ವ್ಯವಸ್ಥೆ: ಚುನಾವಣೆ ಕರ್ತವ್ಯಕ್ಕೆ ಹಾಜರಾದ ಅಧಿಕಾರಿ, ಸಿಬ್ಬಂದಿಗೆ ಕಾಲೇಜಿನ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹೆಚ್ಚಿನ ಕೌಂಟರ್‌ಗಳನ್ನು ತೆಗೆದು ಗದ್ದಲವಾಗದಂತೆ ನೋಡಿಕೊಂಡ ಕುರಿತು ನೌಕರರಿಂದ ಪ್ರಶಂಸೆ ವ್ಯಕ್ತವಾಯಿತು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಮಸ್ಟರಿಂಗ್ ಕೇಂದ್ರಕ್ಕೆ ಕಳಿಸಿದರು.

ನೂತನ ತಾಲ್ಲೂಕು ಕೇಂದ್ರದಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆಯ ನಿಮಿತ್ತ ಮಾಸ್ಟರಿಂಗ್ , ಡಿಮಾಸ್ಟರಿಂಗ್, ಹಾಗೂ ಮತ ಎಣಿಕೆ ಕೇಂದ್ರ ತೆಗೆದು ನೌಕರರಿಗೆ ಅನುಕೂಲ ಮಾಡಿಕೊಟ್ಟಿರುವುದಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್ಂ ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಚುನಾವಣಾ ವೀಕ್ಷಕ ಡಾ.ಡಿ.ಷಣ್ಮುಖಪ್ಪ, ಸಿಪಿಐ ಉದಯ ರವಿ, ಪಿಎಸ್‌ಐಗಳಾದ ಡಿ.ಸುರೇಶ, ಶೀಲಾ ಮೂಗನಗೌಡ, ತಾ.ಪಂ ಕಾರ್ಯನಿರ್ವಹಕಾಧಿಕಾರಿ ಡಾ.ಡಿ.ಮೋಹನ್ ಹಾಗೂ ಕೃಷ್ಣಮೂರ್ತಿ ಅವರು ಮತಪಟ್ಟೆಗೆಯ ಸಿದ್ದತೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.