ಸಾಂದರ್ಭಿಕ ಚಿತ್ರ
ಕುಷ್ಟಗಿ: ‘ಮಳೆಗಾಲದಲ್ಲಿ ವಿದ್ಯುತ್ ಸಬಂಧಿ ಕೆಲಸ ಕೆಲಸಕಾರ್ಯಗಳಿಗೆ ಹೊರಗುತ್ತಿಗೆ ಮೂಲಕ ಕೆಲಸಗಾರರ (ಗ್ಯಾಂಗ್‌ಮನ್) ತಾತ್ಕಾಲಿಕ ನೇಮಕಾತಿ ವಿಷಯದಲ್ಲಿ ಗಂಗಾವತಿಯಲ್ಲಿನ ಜೆಸ್ಕಾಂ ವಿಭಾಗೀಯ ಕಚೇರಿ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ವಿದ್ಯುತ್ ಕಾಮಗಾರಿ ಗುತ್ತಿಗೆದಾರರ ಸಂಘದ ಆರೋಪಿಸಿದೆ.
ಈ ವಿಷಯ ಕುರಿತು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘದ ಜಿಲ್ಲಾ ಅಧ್ಯಕ್ಷ ಆಸೀಫ್ ಡಲಾಯತ್, ತಾಲ್ಲೂಕು ಅಧ್ಯಕ್ಷ ಯಮನೂರಪ್ಪ ಕಟ್ಟಿಮನಿ ಇತರೆ ಪದಾಧಿಕಾರಿಗಳು, ‘ಈ ಅಕ್ರಮದಲ್ಲಿ ಜೆಸ್ಕಾ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಟೆಂಡರ್ ಪಡೆದ ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡು ಹಣ ಲಪಟಾಯಿಸಿದ್ದು, ಪರಿಶೀಲನೆ ನಡೆಸಿ ಸಂಬಂಧಿಸಿದವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಎಲ್-1 ದರದಲ್ಲಿ ಅತಿ ಕಡಿಮೆ ದರ ನಮೂದಿಸುವವರಿಗೆ ಈ ಟೆಂಡರ್ ವಹಿಸಿಕೊಡಲಾಗುತ್ತಿದ್ದು ತಲಾ ಗ್ಯಾಂಗ್‌ಮನ್‌ಗೆ ₹15,000 ಕನಿಷ್ಠ ಕೂಲಿಯ ಜೊತೆಗೆ ಇತರೆ ಖರ್ಚುಗಳು ಸೇರಿ ತಿಂಗಳಿಗೆ ಒಟ್ಟು ತಲಾ ₹ 20,710 ರಂತೆ ಹತ್ತು ಜನರಿಗೆ ₹ 2.07 ಲಕ್ಷ ಕೂಲಿ ಹಣವನ್ನು ಟೆಂಡರ್ ಪಡೆದವರಿಗೆ ಜೆಸ್ಕಾಂ ಪಾವತಿಸಬೇಕಾಗುತ್ತದೆ. ಸರ್ಕಾರ ಕೆಲಸಗಾರರಿಗೆ ದಿನಕ್ಕೆ ₹ 500 ರಂತೆ ಕನಿಷ್ಟ ಕೂಲಿ ನಿಗದಿಪಡಿಸಿದೆ. ಆದರೆ ಕೇವಲ ₹ 1 ಮಾತ್ರ (₹ 501) ಹೆಚ್ಚಿಗೆ ನಮೂದಿಸಿದ ಕಾರಟಗಿ ತಾಲ್ಲೂಕಿನ ಮೈಲಾಪುರದ ಅಮರಶ್ರೀ ಎಲೆಕ್ಟ್ರಿಕಲ್ಸ್ ಹೆಸರಿನ ಗುತ್ತಿಗೆದಾರ ಟೆಂಡರ್ ಗಿಟ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಕೆಲಸಗಾರರಿಗೆ ದಿನಕ್ಕೆ ₹ 700 ರಿಂದ ₹1000 ವರೆಗೆ ಖರ್ಚಾಗುತ್ತದೆ. ಆದರೆ ಟೆಂಡರ್ ಪಡೆದ ಗುತ್ತಿಗೆದಾರ ಕೇವಲ ₹501 ರಷ್ಟು ತೀರಾ ಕಡಿಮೆ ದರ ನಮೂದಿಸಿರುವುದರ ಹಿಂದೆ ಜೆಸ್ಕಾಂ ಅಧಿಕಾರಿಗಳ ಕುಮ್ಮಕ್ಕು ಇದೆ. ನಿಜವಾಗಿಯೂ ಕೆಲಸ ಮಾಡಬೇಕೆಂಬ ಗುತ್ತಿಗೆದಾರ ಇಷ್ಟೊಂದು ಕಡಿಮೆ ಕೂಲಿಯಲ್ಲಿ ಕೆಲಸಗಾರರನ್ನು ಪೂರೈಸುವುದಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.
ಗಂಗಾವತಿ ವಿಭಾಗೀಯ ಕಚೇರಿ ವ್ಯಾಪ್ತಿಯಲ್ಲಿ ಕಾರಟಗಿ, ಗಂಗಾವತಿ ಮತ್ತು ಕುಷ್ಟಗಿ ಉಪವಿಭಾಗಗಳಿದ್ದು ಒಟ್ಟು 30 ಕೆಲಸಗಾರರನ್ನು ಪೂರೈಸಬೇಕು. ಕೆಲಸದ ಅವಧಿ ಜುಲೈ 1 ರಿಂದ 31ರವರೆಗೆ ಇದ್ದು ಕುಷ್ಟಗಿ ಉಪ ವಿಭಾಗಕ್ಕೆ ಗ್ಯಾಂಗ್‌ಮನ್‌ಗಳನ್ನು ಪೂರೈಸಿಲ್ಲ. ಕೆಲಸವೂ ನಡೆದಿಲ್ಲ. ಹೀಗಿರುವಾಗ ಈ ಟೆಂಡರ್ ಪ್ರಕ್ರಿಯೆ ನಡೆಸುವುದರ ಉದ್ದೇಶವಾದರೂ ಏನು ಎಂದು ಸಂಘದ ಪ್ರತಿನಿಧಿಗಳು ಪ್ರಶ್ನಿಸಿದರು.
ಬೋಗಸ್ ಬಿಲ್: ಇದೇ ರೀತಿ ಹಿಂದಿನ ವರ್ಷದಲ್ಲೂ ಟೆಂಡರ್ ಕರೆಯಲಾಗಿತ್ತು ಒಬ್ಬ ಕೆಲಸಗಾರರೂ ಬಂದಿರಲಿಲ್ಲ. ಆದರೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಿ ಹಣ ಗುಳುಂ ಮಾಡಲಾಗಿದೆ. ಪರಿಪೂರ್ಣ ಕೆಲಸ ನಡೆದಿದೆ ಎಂದು ಇಲ್ಲಿಯ ಉಪವಿಭಾಗದ ಅಧಿಕಾರಿಗಳು ವರದಿ ಸಲ್ಲಿಸಿರುವುದು ಅಚ್ಚರಿ ಮೂಡಿಸಿದೆ ಎಂದರು.
ಗೌರವ ಅಧ್ಯಕ್ಷ ಶಿವಪುತ್ರಪ್ಪ ಜರಗಡ್ಡಿ, ಜಿಲ್ಲಾ ಉಪಾಧ್ಯಕ್ಷ ಸರ್ಫರಾಜ್, ಅಶೋಕ್ ಬಳ್ಳೊಳ್ಳಿ, ನಾಗರಾಜ ಘೋವಿ, ರಾಜಾಸಾಬ್ ಮಾಗಡಿ, ಬಾಷಾ ಕನಕಾಪುರ, ಖಾಜಾಸಾಬ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.