ADVERTISEMENT

ಸಿಎಂ ರಾಜೀನಾಮೆ ಅನಿವಾರ್ಯ ಅಲ್ಲ: ಅಮರೇಗೌಡ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:14 IST
Last Updated 24 ಸೆಪ್ಟೆಂಬರ್ 2024, 14:14 IST
ಅಮರೇಗೌಡ ಬಯ್ಯಾಪುರ
ಅಮರೇಗೌಡ ಬಯ್ಯಾಪುರ   

ಕುಷ್ಟಗಿ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧದ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದ್ದರೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.

ಹೈಕೋರ್ಟ್ ಆದೇಶದ ನಂತರ ಮಂಗಳವಾರ ಇಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರೇ ಆದರೂ ಕಾನೂನಿಗೆ ತಲೆ ಬಾಗಲೇಬೇಕು. ಆದರೆ, ರಾಜೀನಾಮೆ ಸೇರಿದಂತೆ ಯಾವುದೇ ವಿಚಾರಕ್ಕೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುವುದು ಬಿಜೆಪಿ ಹಕ್ಕು, ಆದರೆ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವವರು ಆಯಾ ಪಕ್ಷದ ಶಾಸಕರು ಎಂಬುದನ್ನು ಮರೆಯಬಾರದು ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಹೈಕೋರ್ಟ್ ತೀರ್ಪಿನಿಂದ ಸಿದ್ದರಾಮಯ್ಯ ಅವರು ವಿಚಲಿತರಾಗುವ ಪ್ರಶ್ನೆಯೇ ಇಲ್ಲ. ನೇರ, ನಿಷ್ಠುರ ಮತ್ತು ಉತ್ತಮ ಆಡಳಿತಗಾರನಿಗೆ ಈ ರೀತಿ ಆಗಬಾರದಿತ್ತು ಎಂಬ ನೋವು ಕಾಡುತ್ತಿದೆ ಎಂದ ಬಯ್ಯಾಪುರ, ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಮುಖ್ಯಮಂತ್ರಿ ಆಕಾಂಕ್ಷಿಗಳು ಇರಬಹುದು. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ವಿರೋಧಿಗಳು ಇಲ್ಲವೇ ಇಲ್ಲ ಎಂದರು.

ADVERTISEMENT

ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮತ್ತು ಪಕ್ಷದ ಅನೇಕ ಮುಖಂಡರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.