ಅಳವಂಡಿ: ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪಣತೊಡಬೇಕು ಎಂದು ಪಿಎಸ್ಐ ನಾಗಪ್ಪ ಹೇಳಿದರು.
ಸಮೀಪದ ಬೋಚನಹಳ್ಳಿ ಗ್ರಾಮದ ಸ್ಮಶಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಗ್ರಾಮದ ಅಂಬೇಡ್ಕರ್ ಯುವಕ ಸಂಘ ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಅಂಬೇಡ್ಕರ್ ಅವರು ನವ ಭಾರತ ನಿರ್ಮಾಣಕ್ಕೆ ಬೆಳಕು ಚೆಲ್ಲಿದ ಸೂರ್ಯ. ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದ್ದಲ್ಲದೆ ಒಬ್ಬ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಹಾಗೂ ಸಾಮಾಜಿಕ ಸುಧಾರಕರಾಗಿ ಗುರುತಿಸಿಕೊಂಡಿದ್ದರು. ದೇಶದಲ್ಲಿ ದಲಿತ, ಬೌದ್ಧ ಚಳವಳಿ ಮತ್ತು ಮಹಿಳೆಯರ, ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿ, ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆಯಾಗಿ ಉಳಿದಿದ್ದಾರೆ ಎಂದರು.
ಮುಖಂಡ ಭೀಮೇಶಪ್ಪ ಹವಳ್ಳನವರ ಮಾತನಾಡಿ, ಅಸ್ಪೃಶ್ಯತೆ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು ದೇಶದ ಸಂವಿಧಾನ ರಚಿಸಿದ ಡಾ. ಬಿ.ಆರ್ ಅಂಬೇಡ್ಕರ್ ಸದಾ ಸ್ಮರಣೆ ಮಾಡಬೇಕು ಎಂದರು.
ಎಎಸ್ಐ ನೀಲಕಂಠಪ್ಪ, ಪ್ರಮುಖರಾದ ನಿಂಗಪ್ಪ ಅವೋಜಿ, ಮೈಲಾರಪ್ಪ ಕವಲೂರು, ದುರಗಪ್ಪ ಹನಕುಂಟಿ, ಗಿಡ್ಡಪ್ಪ ಯಲ್ಲಣ್ಣವರ್, ದೊಡ್ಡ ಸುಂಕಪ್ಪ ಯಲ್ಲಣ್ಣವರ್, ನಾಗರಾಜ್ ಮರಿಯನ್ನವರ, ನಿಂಗರಾಜ್, ಗೊಣ್ಣೆಪ್ಪ ಬೆಟಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.