ADVERTISEMENT

ಅಂಜನಾದ್ರಿ ಬೆಟ್ಟ ಅಭಿವೃದ್ಧಿ: 56 ಜನ ಭೂ ಮಾಲೀಕರಿಂದ ಆಕ್ಷೇಪಣೆ ಸಲ್ಲಿಕೆ

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಭೂಮಿ ನೀಡಲು ರೈತರ ವಿರೋಧ

ಪ್ರಮೋದ
Published 27 ಜುಲೈ 2022, 4:21 IST
Last Updated 27 ಜುಲೈ 2022, 4:21 IST
ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಭೂಮಿ ನೀಡಲು ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.

ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಒಟ್ಟು 62 ಎಕರೆ ಭೂಮಿ ಬಳಸಿಕೊಳ್ಳಲು ಮುಂದಾಗಿದೆ.

ಇಷ್ಟೊಂದು ಭೂಮಿಗೆ ಹನುಮನಹಳ್ಳಿ, ಚಿಕ್ಕರಾಂಪುರ ಹಾಗೂ ಆನೆಗೊಂದಿ ಗ್ರಾಮಗಳ ಒಟ್ಟು 61 ಜನ ಮಾಲೀಕರು ಇದ್ದು, ಇದರಲ್ಲಿ 56 ಜನ ರೈತರು ಜಿಲ್ಲಾಡಳಿತಕ್ಕೆ ಭೂಮಿ ನೀಡಲು ವಿರೋಧಿಸಿ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ಐದು ಜನರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿ ಮೊದಲು ಆನೆಗೊಂದಿ ಗ್ರಾಮದ ಆರ್‌. ರಮೇಶ್ ಬಾಬು ಎಂಬುವರು ಮಾತ್ರ ಜಿಲ್ಲಾಡಳಿತಕ್ಕೆ ಆಕ್ಷೇಪ ಸಲ್ಲಿಸಿದ್ದರು. ಇದರ ಪ್ರತಿಯನ್ನು ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೂ ರವಾನಿಸಿದ್ದರು. ಈಗ ಆಕ್ಷೇಪಣೆ ಸಲ್ಲಿಸಿದವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಜು. 25 ಹಾಗೂ 26ರಂದು ಉಳಿದವರಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ.

‘ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಅಲ್ಲಿನ ಸುತ್ತಮುತ್ತಲ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಯೋಜನೆ ಸರ್ಕಾರ ಕೈಬಿಡಬೇಕು. ವರ್ಷಕ್ಕೆ ಎರಡು ಬೆಳೆ ಬೆಳೆಯುವ ಫಲವತ್ತಾದ ಭೂಮಿ ಈ ಭಾಗದ ರೈತರಿಗೆ ಬದುಕು ನೀಡಿದೆ. ಅಂಜನಾದ್ರಿ ಸಮೀಪದಲ್ಲಿಯೇ ಬಂಜರು ಭೂಮಿಯಿದ್ದು ಬೇಕಾದರೆ ಅದನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಲಿ’ ಎಂದು ಆಕ್ಷೇಪಣೆ ಪತ್ರದಲ್ಲಿ ರೈತರು ಮನವಿ ಮಾಡಿದ್ದಾರೆ.

ಸರ್ಕಾರಿ ಜಾಗ ಬಳಸಿಕೊಳ್ಳಿ: ಅಂಜನಾದ್ರಿ ಸುತ್ತಮುತ್ತಲು ಸರ್ಕಾರದ ಜಾಗವಿದ್ದು ಅದನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು. ಫಲವತ್ತಾದ ಭೂಮಿಯನ್ನು ನಮಗೇ ಬಿಡಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

ಅಭಿವೃದ್ಧಿಯನ್ನು ಅಂಜನಾದ್ರಿ ಕ್ಷೇತ್ರಕ್ಕೆ ಮಾತ್ರ ಸೀಮಿತ ಮಾಡದೆ ಸುತ್ತಮುತ್ತಲಿರುವ ಆನೆಗೊಂದಿ, ನವೃ ವೃಂದಾವನ ಗಡ್ಡೆ, ಪಂಪಾ ಸರೋವರ, ದುರ್ಗಾದೇವಿ ಬೆಟ್ಟ, ತಳವಾರ ಘಟ್ಟ, ಕೃಷ್ಣದೇವರಾಯ ಸಮಾಧಿ (64 ಮಂಟಪದ ಸಾಲು) ಹಾಗೂ ಗಗನ ಮಹಲ್‌ ಈ ಎಲ್ಲಾ ಸ್ಥಳಗಳಿಗೆ ಅನುಕೂಲವಾಗುವ ಆನೆಗೊಂದಿ ಉತ್ಸವ ನಡೆಯುವ ಮೈದಾನವಿದೆ. ಅಲ್ಲಿಯೇ ತುಂಗಭದ್ರಾ ನದಿಯ ನೀರೂ ಸಿಗುತ್ತದೆ. ಅದೇ ಜಾಗದಲ್ಲಿ ಅಭಿವೃದ್ಧಿ ಕೆಲಸ ಮಾಡಿ ಎನ್ನುವುದು ರೈತರ ಆಗ್ರಹವಾಗಿದೆ.

ಅಂಜನಾದ್ರಿ ಸಮೀಪದಲ್ಲಿ ಭೂಮಿ ಹೊಂದಿರುವ ರೈತ ಪ್ರಶಾಂತ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ’ರೈತರಲ್ಲೆರೂ ಸೇರಿ ಭೂಮಿ ನೀಡದಿರಲು ನಿರ್ಧರಿಸಿದ್ದೇವೆ. ಸರ್ಕಾರ ಬಲವಂತವಾಗಿ ನಮ್ಮಿಂದ ಭೂಮಿ ಕಸಿದುಕೊಳ್ಳಬಾರದು. ನಮ್ಮ ವಿರುದ್ಧವಾಗಿ ನಡೆದುಕೊಂಡರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದರು.

***

ಭೂ ಸ್ವಾಧೀನಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
- ಎಂ. ಸುಂದರೇಶ ಬಾಬು,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.