ADVERTISEMENT

ಶಿಕ್ಷಕರ ಕಾಳಜಿಗೆ ಪಾಲಕರ ಮೆಚ್ಚುಗೆ

ಹಿರಿಮೆ ಹೆಚ್ಚಿಸಿಕೊಂಡ ಮೀಯಾಪೂರ ಶಾಲೆ: ಹಾಜರಾತಿ ಹೆಚ್ಚಳ

ಕಿಶನರಾವ್‌ ಕುಲಕರ್ಣಿ
Published 28 ನವೆಂಬರ್ 2019, 9:46 IST
Last Updated 28 ನವೆಂಬರ್ 2019, 9:46 IST
ಹನುಮಸಾಗರ ಸಮೀಪದ ಮೀಯಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು
ಹನುಮಸಾಗರ ಸಮೀಪದ ಮೀಯಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು   

ಹನುಮಸಾಗರ: ಸಮೀಪದ ಮೀಯಾಪುರ ಗ್ರಾಮದ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದಾಗಿ ಹಾಜರಾತಿಯೂ ಹೆಚ್ಚಿದೆ.

ಭಣಗುಡುತ್ತಿದ್ದ ಶಾಲೆಯ ಶಾಲೆ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಇದರ ಹಿಂದೆ ಶಿಕ್ಷಕರ ಕಾಳಜಿ ಇದ್ದು, ಅವರ ಕಾರ್ಯವೈಖರಿ ಪಾಲಕರು ಮತ್ತು ಗ್ರಾಮಸ್ಥರ ಮೆಚ್ಚುಗೆಗೆ
ಪಾತ್ರವಾಗಿದೆ.

ಏಳನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಎಂಟು ಜನ ಶಿಕ್ಷಕರಿದ್ದು, 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ADVERTISEMENT

ಶಿಕ್ಷಕರು ಸೃಜನಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾರೆ. ಇದರಿಂದಾಗಿ ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರುವಂತಾಗಿದೆ.

‘ಕೆಣಕು-ತಿಣಕು-ಮಿಣಕು‘ ಇಂಗ್ಲಿಷ್ ಸ್ಪೆಲ್ಲಿಂಗ್ ಗೇಮ್, ವಿನೋದ ಗಣಿತ, ನಕ್ಷೆಯಲ್ಲೊಂದು ನೋಟ, ನೋಡಿ ಕಲಿ ಮಾಡಿ ಕಲಿ ಚಟುವಟಿಕೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಅಲ್ಲದೆ, ವಿಜ್ಞಾನ ಮಾದರಿಗಳ ತಯಾರಿಕಾ ಸ್ಪರ್ಧೆ, ರಸಪ್ರಶ್ನೆ, ಒಲವು-ಗೆಲುವು ಸ್ಪರ್ಧೆಗಳನ್ನು ವಾರಕ್ಕೊಮ್ಮೆ ಏರ್ಪಡಿಸಲಾಗುತ್ತದೆ.

ಇಲ್ಲಿನ ಬಹುತೇಖ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಎಲ್ಲಸಂಪನ್ಮೂಲ ಈ ಶಾಲೆಗೆ ಹರಿದು ಬರಲು ಮುಖ್ಯಕಾರಣವಾಗಿದೆ.

ಮಕ್ಕಳಿಗೆ ಪರಿಸರ ಪಾಠ: ಶಾಲೆಯಲ್ಲಿಯೇ ಎರೆಗೊಬ್ಬರ ತಯಾರಿಕಾ ಘಟಕ ಇರುವುದರಿಂದ ಮಕ್ಕಳು ಕಸ ವಿಂಗಡಣೆ ಮಾಡಿ ಅದನ್ನು ಕಾಂಪೋಸ್ಟ್‌ ಗುಂಡಿಗೆ ಹಾಕುತ್ತಾರೆ. ಶಾಲಾ ಆವರಣದ ಗಿಡಗಳ ನಿರ್ವಹಣೆಯಂತಹ ಕಾರ್ಯಗಳನ್ನು ಪರಿಸರ ಮಂತ್ರಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡಗಳು ನಿರ್ವಹಿಸುತ್ತಿವೆ.

ಶಾಲೆಯಲ್ಲಿ ಕೊಳವೆಬಾವಿ ಇರುವುದರಿಂದ ನೀರಿನ ಕೊರತೆ ಇಲ್ಲ. ಶಾಲಾ ಆವರಣದಲ್ಲಿ ಇನ್ನಷ್ಟು ಗಿಡಗಳು,ಹೂವಿನ ಸಸಿಗಳು, ಔಷಧೀಯ ಸಸಿಗಳನ್ನು ನೆಡಬೇಕಾಗಿದೆ ಎಂದು ಶಿಕ್ಷಕ ನಾಗುಸಾ ನಿರಂಜನ ಹೇಳುತ್ತಾರೆ.

ಪ್ರತಿ ತರಗತಿಗಳಿಗೆ ಸ್ಪೀಕರ್: ರೇಡಿಯೊ ಪಾಠಕ್ಕಾಗಿ ಪ್ರತಿ ತರಗತಿಗಳಿಗೆ ಆಡಿಯೊ ಸ್ಪೀಕರ್‌ಗಳನ್ನು ಅಳವಡಿಸಿದೆ. ಕೆಲ ಅವಧಿಯಲ್ಲಿ ಈ ಮೂಲಕ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಆಡಿಯೊ ಕ್ಲಿಪ್ ಕೇಳಿಸಲಾಗುತ್ತದೆ. ಶಾಲೆಯಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್, ಟಿ.ವಿ ಇದ್ದು, ಇ-ವಿದ್ಯಾಲೋಕ ಸಹಯೋಗದೊಂದಿಗೆ 5 ರಿಂದ 7 ನೇ ತರಗತಿಯ ಮಕ್ಕಳಿಗೆ ಪ್ರತಿದಿನ ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳ ಇ-ತರಗತಿಗಳುನಡೆಯುತ್ತವೆ.

ಶಾಲೆಯ ಹಾಗೂ ಮಕ್ಕಳ ಕಲಿಕಾ ಮಟ್ಟದಲ್ಲಿ ಆಗಿರುವ ಬದಲಾವಣೆ ಕಂಡ ಪಾಲಕರು ಖಾಸಗಿ ಶಾಲೆ ಬಿಡಿಸಿ ತಮ್ಮೂರ ಶಾಲೆಗೆ ದಾಖಲಿಸಿದ್ದಾರೆ ಎಂದು ಮುಖ್ಯಶಿಕ್ಷಕ ರಾಮನಗೌಡ ಮಾಲಿಪಾಟೀಲ ಅಭಿಮಾನದಿಂದ
ಹೇಳಿದರು.

ಜವಾಬ್ದಾರಿ ಮತ್ತು ಕಲಿಕಾ ತಂಡಗಳು: ಶಾಲೆಯಲ್ಲಿ ಆರು ಜವಾಬ್ದಾರಿ ತಂಡಗಳನ್ನು ರಚಿಸಲಾಗಿದ್ದು, ಮಾರ್ಗದರ್ಶಿ ಶಿಕ್ಷಕರ ನೆರವಿನಲ್ಲಿ ತಂಡಗಳು ನಿತ್ಯದ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಪ್ರತಿ ತರಗತಿಯಲ್ಲಿ ಕಲಿಕಾ ತಂಡಗಳನ್ನು ರಚಿಸಲಾಗಿದ್ದು ಮಕ್ಕಳಲ್ಲಿ ಜವಾಬ್ದಾರಿ, ನಾಯಕತ್ವ ಗುಣ, ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂಬುದು ಶಿಕ್ಷಕರ ಅನುಭವದ
ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.