ADVERTISEMENT

₹24.10 ಲಕ್ಷ ಮೌಲ್ಯದ ಸಾಮಗ್ರಿ ವಶ

ಟ್ರೇಲರ್‌ ಕಳ್ಳರ ಬಂಧನ; ಹೊರ ಜಿಲ್ಲೆಗಳಲ್ಲಿಯೂ ಕೃತ್ಯ ನಡೆಸಿರುವ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 5:33 IST
Last Updated 20 ಅಕ್ಟೋಬರ್ 2023, 5:33 IST
ಟ್ರ್ಯಾಕ್ಟರ್‌ ಮತ್ತು ಟ್ರೇಲರ್‌ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚಿದ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ತಂಡ
ಟ್ರ್ಯಾಕ್ಟರ್‌ ಮತ್ತು ಟ್ರೇಲರ್‌ ಕಳ್ಳತನದ ಆರೋಪಿಗಳನ್ನು ಪತ್ತೆ ಹಚ್ಚಿದ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ತಂಡ   

ಕೊಪ್ಪಳ: ತಾಲ್ಲೂಕಿನ ದದೇಗಲ್‌ ಗ್ರಾಮದ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್‌ ಮತ್ತು ಟ್ರೇಲರ್‌ ಕಳ್ಳತನ ಮಾಡಿದ ಪ್ರಕರಣವನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಮುಂಡರಗಿ ತಾಲ್ಲೂಕಿನ ಹಿರೇವಡ್ಡಟ್ಟಿಯ ಕಿರಣ ಕುರ್ತುಕೋಟಿ ಮತ್ತು ರಮೇಶ ಬೂದಿಹಾಳ ಬಂಧಿತರು. ಇವರಿಂದ ಒಟ್ಟು ₹24.10 ಲಕ್ಷ ಮೌಲ್ಯದ ಐದು ಟ್ರಾಕ್ಟರ್‌ಗಳ ಟ್ರೇಲರ್‌ ಮತ್ತು ಎಂಜಿನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಗದಗ, ಮಂಡ್ಯ ಹಾಗೂ ದಾವಣಗೆರೆ ಜಿಲ್ಲೆಗಳ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಆರೋಪದಲ್ಲಿಯೂ ಇವರು ಭಾಗಿಯಾದ ಮಾಹಿತಿ ಲಭ್ಯವಾಗಿದೆ.

ಈ ಘಟನೆಯ ದೂರು ದಾಖಲಾದ ಮೂರು ದಿನಗಳಲ್ಲಿಯೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಅಶೋಕ ಬೇವೂರು, ತನಿಖಾ ವಿಭಾಗದ ಪಿಎಸ್‌ಐ ಹೀರಪ್ಪ ನಾಯ್ಕ, ಗ್ರಾಮೀಣ ಠಾಣೆಯ ನಿಂಗಪ್ಪ, ಲಕ್ಕಪ್ಪ, ಮಹೇಶ ಸಜ್ಜನ, ಮಾರುತಿ, ಉಮೇಶ, ಅಂದಿಗಾಲಪ್ಪ, ಗಂಗಾಧರ, ಚಂದಾಲಿಂಗ, ಚಂದ್ರಶೇಖರ್‌, ಮಹಿಬೂಬ್‌, ಮರಿಯಪ್ಪ ಸಿಡಿಆರ್‌ ವಿಭಾಗದ ಪ್ರಸಾದ್‌, ಕೊಟೇಶ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಪ್ರಕರಣ ಬೇಧಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ಕೆಲಸ ಮಾಡಿದ್ದಾರೆ. ಒಟ್ಟು ಆರು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ADVERTISEMENT

ಪೊಲೀಸ್‌ ದೌರ್ಜನ್ಯದ ಆರೋಪ: ಕುಕನೂರು ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಕುಕನೂರು ಠಾಣೆಯ ಪಿಎಸ್‌ಐ ಗುರುರಾಜ ತಮ್ಮ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ಮಾಡಿದ್ದಾರೆ ಎಂದು ಮಹಾಂತಯ್ಯ ಅಂಗಡಿ ಆರೋಪಿಸಿದ್ದಾರೆ. ಈ ಘಟನೆ ಕುರಿತು ವಿಡಿಯೊಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. 

ಪವನ ಶಕ್ತಿ ರೆಕ್ಕೆ ಅಳವಡಿಸಲು ಬೃಹತ್ ವಾಹನಗಳ ಓಡಾಟಗಳಿಂದಾಗಿ ಕೃಷಿ ಹಾಳಾಗುತ್ತದೆ ಎಂದು ಗುರುರಾಜ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ದೂರು ದಾಖಲು: ‘ಅ. 17ರಂದು ಪೆಟ್ರೋಲಿಂಗ್‌ ಕಾರ್ಯದಲ್ಲಿ ಚಿಕೇನಕೊಪ್ಪ ಗ್ರಾಮಕ್ಕೆ ತೆರಳಿದ್ದಾಗ ಮಹಾಂತಯ್ಯ ಅಂಗಡಿ ಗ್ರಾಮದ ಸಾರ್ವಜನಿಕರು ತನ್ನ ಮಾತು ಕೇಳದಿದ್ದರೆ ಒಬ್ಬರೇ ಸಿಕ್ಕಾಗ ಜೀವ ಸಹಿತ ಬಿಡುವುದಿಲ್ಲ. ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ. ಇತನಿಂದ ಸಾರ್ವಜನಿಕ ಶಾಂತಿ ಹಾಳಾಗುತ್ತದೆ. ಇತ 2008ರಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ’ ಎಂದು ಪಿಎಸ್‌ಐ ಗುರುರಾಜ ಕುಕನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.