ADVERTISEMENT

‘ಹುಚ್ಚೀರಪ್ಪಜ್ಜನ ಪಾತ್ರಕ್ಕೆ ಜೀವತುಂಬಿದ್ದ ಕಲಾವಿದ ಖಾಜಾಸಾಬ’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 3:15 IST
Last Updated 30 ಸೆಪ್ಟೆಂಬರ್ 2025, 3:15 IST
ಯಲಬುರ್ಗಾ ತಾಲ್ಲೂಕು ಕರಮುಡಿ ಗ್ರಾಮದ ರಂಗಭೂಮಿ ಕಲಾವಿದ ಖಾಜಾಸಾಬ ಕಲ್ಲೂರು ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು
ಯಲಬುರ್ಗಾ ತಾಲ್ಲೂಕು ಕರಮುಡಿ ಗ್ರಾಮದ ರಂಗಭೂಮಿ ಕಲಾವಿದ ಖಾಜಾಸಾಬ ಕಲ್ಲೂರು ನಿಧನದ ಹಿನ್ನೆಲೆಯಲ್ಲಿ ನುಡಿನಮನ ಕಾರ್ಯಕ್ರಮದಲ್ಲಿ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು   

ಯಲಬುರ್ಗಾ: ‘ಕೋಡಿಕೊಪ್ಪದ ಹಠಯೋಗಿ ಹುಚ್ಚೀರಪ್ಪಜ್ಜನ ಪಾತ್ರದ ಮೂಲಕ ಈ ಭಾಗದ ಬಹು ಸಂಖ್ಯೆಯ ಜನರ ಅಭಿಮಾನ ಗಿಟ್ಟಿಸಿಕೊಂಡಿದ್ದ ರಂಗಭೂಮಿ ಕಲಾವಿದ ಖಾಜಾಸಾಬ ಕಲ್ಲೂರು, ಪಾತ್ರಕ್ಕೆ ಜೀವ ತುಂಬಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ’ ಎಂದು ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನಕರಮುಡಿ ಗ್ರಾಮದ ಗುಲಗಂಜಿಮಠದ ಬಯಲು ಜಾಗದಲ್ಲಿ ನಿಧನರಾಗಿದ್ದ ಖಾಜಾಸಾಬ ಪಾರ್ಥಿವ ಶರೀರದ ಬಳಿ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿರಂತರ 90 ಪ್ರಯೋಗಗಳನ್ನು ಪ್ರದರ್ಶಿಸಿದ ನಾಟಕದಲ್ಲಿ ಕಲಾ ಪ್ರೌಢಿಮೆಯನ್ನು ಮೆರೆದಿದ್ದ ಖಾಜಾಸಾಬ ಒಬ್ಬ ಅಪ್ಪಟ ದೇಸಿ ಕಲಾವಿದ. ಹಾಗೆಯೇ ಸಂಗೀತಕಲಾವಿದರಾಗಿದ್ದ ಅವರು ಭಜನಾ ತಂಡದಲ್ಲಿದ್ದುಕೊಂಡು ತಬಲಾ ಹಾಗೂ ಹಾರ್ಮೋನಿಯಂ ನುಡಿಸುವುದರಲ್ಲಿಯೂ ಸಿದ್ಧಹಸ್ತರು. ಇಂತಹ ಒಬ್ಬ ಅಪರೂಪದ ಕಲಾವಿದರು ಅನಾರೊಗ್ಯದಿಂದ ನಿಧನರಾಗಿದ್ದು, ಕಲಾಬಳಗ ಬಡವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕುಕನೂರಿನ ಅನ್ನದಾನಮಠದ ಮಹಾದೇವರು ಸ್ವಾಮೀಜಿ, ನಿಡಗುಂದಿಕೊಪ್ಪದ ಚನ್ನಬಸವ ಶ್ರೀಗಳು, ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ, ವೀರಯ್ಯ ಹಿರೇಮಠ, ಭೀಮಪ್ಪ ಹವಳಿ ಅವರು ಕಲಾವಿದ ಖಾಜಾಸಾಬ ಅವರ ವ್ಯಕ್ತಿತ್ವದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ADVERTISEMENT

ಜಿ.ಪಂ. ಮಾಜಿ ಸದಸ್ಯ ಸಿ.ಎಚ್. ಪಾಟೀಲ, ಶಕುಂತಲಾದೇವಿ ಮಾಲಿಪಾಟೀಲ, ತಾ.ಪಂ ಮಾಜಿ ಅಧ್ಯಕ್ಷ ಸಂಗಪ್ಪ ಬಂಡಿ, ಕರವೀರಭದ್ರೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷ ಶರಣಪ್ಪಗೌಡ ಪೊಲೀಸ್‍ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ಪ್ರಭಣ್ಣವರ, ಯಲಬುರ್ಗಾ ಪ.ಪಂ ಮಾಜಿ ಅಧ್ಯಕ್ಷ ಅಖ್ತರಸಾಬ ಖಾಜಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜ ಗುಳಗುಳಿ, ಎಸ್.ಎನ್, ಶ್ಯಾಗೋಟಿ, ರಾಜಶೇಖರ ನಿಂಗೋಜಿ, ವೀರಣ್ಣ ಪಟ್ಟೇದ, ವೀರಪ್ಪ, ಕಾಶಯ್ಯ ನಂದಿಕೋಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.