ADVERTISEMENT

ನೂಲಿನಲ್ಲಿ ಅರಳಿದ ಹಲವು ಕಲಾಕೃತಿ

ನೂಲು, ವೈರ್, ಪ್ಲ್ಯಾಸ್ಟಿಕ್‌ನಲ್ಲಿ ವಿವಿಧ ತರೇವಾರಿ ಸಾಮಗ್ರಿ ತಯಾರಿ

ಸಿದ್ದನಗೌಡ ಪಾಟೀಲ
Published 3 ಏಪ್ರಿಲ್ 2021, 4:45 IST
Last Updated 3 ಏಪ್ರಿಲ್ 2021, 4:45 IST
ಹೆಣಿಗೆ ಕಾರ್ಯದಲ್ಲಿ ತಲ್ಲೀನರಾಗಿರುವ ಯಲಬುರ್ಗಾದ ನಿರ್ಮಲಾ ದೇವಪ್ಪ ಮಸಾಲೆ  ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಹೆಣಿಗೆ ಕಾರ್ಯದಲ್ಲಿ ತಲ್ಲೀನರಾಗಿರುವ ಯಲಬುರ್ಗಾದ ನಿರ್ಮಲಾ ದೇವಪ್ಪ ಮಸಾಲೆ  ಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಕೊಪ್ಪಳ: ಹೊಟ್ಟೆಪಾಡಿಗೆ ಉದ್ಯೋಗ ಅರಿಸಿ ಮಲೆನಾಡಿಗೆ ತೆರಳಿದ ಪತಿಯೊಂದಿಗೆ ಬದುಕು ಕಟ್ಟಿಕೊಂಡು ಹವ್ಯಾಸದ ಮೂಲಕ ಸಮಯ ಕಳೆಯಲು ಹೆಣಿಗೆಯನ್ನೇ ಅವಲಂಬಿಸಿ ಯಶಸ್ಸು ಕಂಡ ಗೃಹಿಣಿಯೊಬ್ಬರ ಸಾಧನೆ ಉಳಿದ ಮಹಿಳೆಯರಿಗೆ ಪ್ರೇರಣೆಯಾಗಿದೆ.

ಪತಿ ದೇವಪ್ಪ ಅವರು ಅಂಚೆ ಇಲಾಖೆಯಲ್ಲಿ 30 ವರ್ಷಗಳ ಸೇವೆಯನ್ನು ದಾಂಡೇಲಿಯಲ್ಲಿ ಸಲ್ಲಿಸಿ ಈಚೆಗೆ ನಿವೃತ್ತರಾಗಿ ಯಲಬುರ್ಗಾದಲ್ಲಿ ವಾಸ ಮಾಡುತ್ತಿದ್ದು, ಪತ್ನಿಯ ನೂಲಿನ ಹೆಣಿಗೆ ಕಾರ್ಯಕ್ಕೆ ಸಹಾಯ, ಪ್ರೋತ್ಸಾಹ ನೀಡುವ ಮೂಲಕ ಸ್ವಾವಲಂಬನೆ ಸಾಧಿಸುವಲ್ಲಿ ನೆರವಾಗಿದ್ದಾರೆ.

ಮೂಲತಃ ಗದಗ ಜಿಲ್ಲೆಯ ಲಕ್ಕುಂಡಿಯವರಾದ ನಿರ್ಮಲಾ ದೇವಪ್ಪ ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿಯ ಗಂಡನ ಮನೆಗೆ ಬಂದು ಪತಿಯ ಜೊತೆ ಮಲೆನಾಡಿನ ನಿಶಬ್ಧ ಪರಿಸರ ಮತ್ತು ಅವರು ವಾಸ ಮಾಡುವ ವಸತಿ ಗೃಹದಲ್ಲಿ ಏಕಾತಾನತೆ ಕಳೆಯುವ ಉದ್ದೇಶದಿಂದ ಹೆಣಿಗೆ ಕಾರ್ಯ ಆರಂಭಿಸಿ ಎಲ್ಲರು ಬೆರಗುಗೊಳ್ಳುವಂತೆ ಅವರ ಕೈಯಲ್ಲಿ ಅರಳಿದ ಈ ಕಲೆ ಹಿಂದುಳಿದ ಭಾಗದಲ್ಲಿಯೂ ಎಲ್ಲ ಮಹಿಳೆಯರಿಗೆ ಪ್ರೇರಣೆ ನೀಡಿದೆ.

ADVERTISEMENT

ಇಬ್ಬರು ಪುತ್ರಿಯರು, ಒಬ್ಬ ಪುತ್ರ ಉನ್ನತ ಶಿಕ್ಷಣ ಪಡೆದು ವಿಯೇಟ್ನಾಂ, ಲಂಡನ್‌, ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು, ಮಕ್ಕಳ ಯಶಸ್ಸು ಕಂಡು ತಾವು ಸಂಭ್ರಮಿಸಿ ಅವರ ಮೇಲೆ ಅವಲಂಬನೆಯಾಗದೆ ತಮ್ಮ ಹೆಣಿಗೆ ವೃತ್ತಿಯ ಮೂಲಕ ಮಾದರಿಯಾಗಿದ್ದಾರೆ.

ಇವರ ಕೈಯಲ್ಲಿ ಅರಳುವ ಶಾಲು, ಕರವಸ್ತ್ರ, ಟಾಪ್ಸ್, ಸ್ವೆಟರ್, ವಿವಿಧ ತರೇಬಾರಿ ಗೊಂಬೆ, ವೈಯರ್‌ನ ಗಣೇಶನ ಮುಖ ಮುದ್ರಿಕೆ, ಕಾರಿನ ಅಲಂಕಾರಿಕ ವಸ್ತುಗಳು, ಮೇಲು ಹೊದಿಕೆ, ಗೊಂಬೆಗಳು ನೋಡುಗರನ್ನು ಆಕರ್ಷಿಸುವುದರ ಜೊತೆಗೆ ಮದುವೆ ಮುಂತಾದ ಸಮಾರಂಭಗಳಿಗೆ ಜನರೇ ಸ್ವಯಂ ಪ್ರೇರಿತರಾಗಿ ಖರೀದಿಸಿ ಕೊಂಡು ಒಯ್ಯುತ್ತಾರೆ.

ಇದನ್ನು ವೃತ್ತಿಯಾಗಿ ಅವರು ಸ್ವೀಕರಿಸದೇ ಪ್ರವೃತ್ತಿ ಎಂದು ಕಲೆಯ ಆರಾಧನೆಯಲ್ಲಿ ತೊಡಗಿದ್ದಾರೆ. ಸಮಯ ಕಳೆಯಲು ಆರಂಭಿಸಿದ ಈ ಹೆಣಿಗೆ ಕಾರ್ಯ ಈಗ ಪಟ್ಟಣದ ಮಹಿಳೆಯರನ್ನು ಆಕರ್ಷಿಸಿದೆ. ಬಡ ಹೆಣ್ಣು ಮಕ್ಕಳಿಗೆ ತರಬೇತಿ ಕೂಡಾ ಅವರು ನೀಡುತ್ತಿದ್ದಾರೆ. ಆದರೆ ತಾಳ್ಮೆ, ಪರಿಶ್ರಮದಿಂದ ಇದು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಿರ್ಮಲಾ ಅವರದು. 'ಖರೀದಿಸಿಕೊಂಡು ಹೋಗುವ ಮಹಿಳೆಯರು ಹೆಣಿಗೆ ಕಾರ್ಯದ ತರಬೇತಿ ಪಡೆಯಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ' ಎಂದು ವಿಷಾದದಿಂದಲೇ ಹೇಳುತ್ತಾರೆ.

ಹವ್ಯಾಸಕ್ಕಾಗಿ ಮತ್ತು ಮಲೆನಾಡಿನ ವಿವಿಧ ಭಾಗಗಗಳಲ್ಲಿ ನೋಡಿದ ವಸ್ತುಗಳನ್ನು ತಯಾರಿಸುವಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಗೃಹಕೃತ್ಯದ ನಂತರ ಒಣ ಹರಟೆ ನಡೆಸದೇ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಅವರ ಮನೆಯ ತುಂಬ ಹೆಣಿಕೆಯ ವಸ್ತುಗಳೇ ತುಂಬಿಕೊಂಡಿವೆ. ಬಟ್ಟೆಯ ಕೈಚೀಲಗಳು, ಬಳಸಿ ಬೀಸಾಕುವ ವಸ್ತುಗಳನ್ನು ಚಾಪೆ, ಮ್ಯಾಟ್, ನೆಲು, ಜೋಕಾಲಿ ಮುಂತಾದ ಪರ್ಯಾಯ ಬಳಕೆಗೆ ಸಾಧನ ಮಾಡಿಕೊಂಡಿದ್ದಾರೆ.

ಅವರು ಮಾರುಕಟ್ಟೆಯಿಂದ ಖರೀದಿಸದೇ ತಾವೇ ತಯಾರಿಸಿದ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಒಂದು ಸಾರಿ ಅವರ ಮನೆಗೆ ಹೋದರೆ ಖರೀದಿಸದೇ ಬರಲು ಸಾಧ್ಯವಿಲ್ಲ ಎಂಬ ಮಟ್ಟಿಗೆ ವೈವಿಧ್ಯಮ ನೂಲಿಕ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಪತಿ ದೇವಪ್ಪ ತಮ್ಮ ಕಚೇರಿಯಲ್ಲಿ ಹೆಚ್ಚಿನ ಸಮಯ ಕಳೆದರೂ, ಪತ್ನಿಯ ಆಸಕ್ತಿಗೆ ಸದಾ ಸಹಕಾರ ನೀಡಿದ್ದಾರೆ.

ನಿರ್ಮಲಾಅವರ ಸಂಪರ್ಕಕ್ಕೆ..9845494522

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.