ADVERTISEMENT

ಅಶ್ಲೀಲ ಸಂದೇಶ ಕಳಿಸಿದ ಆರೋಪ: ಕಚೇರಿಯಲ್ಲೇ ಹಲ್ಲೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 3:40 IST
Last Updated 15 ಜುಲೈ 2021, 3:40 IST

ಕುಷ್ಟಗಿ: ಮೊಬೈಲ್‌ ಮೂಲಕ ಅಶ್ಲೀಲ ಸಂದೇಶ ಕಳಿಸುತ್ತಿದ್ದರು ಎಂಬ ಆರೋಪದ ಮೇಲೆ ಮಹಿಳೆಯೊಬ್ಬರು ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಬುಧವಾರ ಇಲ್ಲಿ ನಡೆದಿದೆ.

ಹೊಸಪೇಟೆ ಮೂಲದವರು ಎನ್ನಲಾದ ಮಹಿಳೆ ಬಳ್ಳಾರಿ ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಪತಿ ಮತ್ತಿತರರೊಂದಿಗೆ ಮಧ್ಯಾಹ್ನ ಕಚೇರಿ ಅವಧಿಯಲ್ಲಿ ಶಿಶು ಅಭಿವೃದ್ಧಿ ಕಚೇರಿಗೆ ಕಾರಿನಲ್ಲಿ ಬಂದಿಳಿದ ಇವರು, ಮೊಬೈಲ್‌ ಮೂಲಕ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ದಾಂಪತ್ಯ ಸಾಮರಸ್ಯ ಹಾಳಾಗಿದೆ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ನಂತರ ಆಕ್ರೋಶಗೊಂಡ ಮಹಿಳೆ ಸಿಡಿಪಿಒ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದನ್ನು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಇಲ್ಲಿಯ ಇತರೆ ಇಲಾಖೆಯ ಕೆಲ ನೌಕರರು ಸಂಧಾನ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಈ ಘಟನೆ ನಡೆದಿರುವುದನ್ನು ಕಚೇರಿ ಸಿಬ್ಬಂದಿಯೂ ದೃಢಪಡಿಸಿದ್ದು ತಾವು ಅಸಹಾಯಕರಾಗಿದ್ದು ಮೂಕಪ್ರೇಕ್ಷಕರಾಗಬೇಕಾಯಿತು ಎಂದು ವಿವರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿಗಾಗಿ ಸಿಡಿಪಿಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.

ADVERTISEMENT

ಈ ಘಟನೆ ಬಗ್ಗೆ ತಮಗೆ ಯಾವುದೇ ದೂರು ಅಥವಾ ಮಾಹಿತಿ ಬಂದಿಲ್ಲ ಎಂದು ಸಿಪಿಐ ಎಸ್‌.ಆರ್‌.ನಿಂಗಪ್ಪ, ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.