ADVERTISEMENT

ಬಳ್ಳಾರಿಯ ಸಾಹಿತ್ಯ ಸಮ್ಮೇಳನ: ಹೆಚ್ಚುವರಿ ಅನುದಾನಕ್ಕೆ ಸಚಿವರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:40 IST
Last Updated 19 ಜೂನ್ 2025, 14:40 IST
ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿಗೆ ಕಸಾಪ ಬಳ್ಳಾರಿ, ಕೊಪ್ಪಳ ಜಿಲ್ಲಾಧ್ಯಕ್ಷರ ನೇತೃತ್ವದ ತಂಡ ಸನ್ಮಾನಿಸಿ, ಮನವಿ ಸಲ್ಲಿಸಿದರು
ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿಗೆ ಕಸಾಪ ಬಳ್ಳಾರಿ, ಕೊಪ್ಪಳ ಜಿಲ್ಲಾಧ್ಯಕ್ಷರ ನೇತೃತ್ವದ ತಂಡ ಸನ್ಮಾನಿಸಿ, ಮನವಿ ಸಲ್ಲಿಸಿದರು   

ಕಾರಟಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಬಳ್ಳಾರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹10 ಕೋಟಿ ಮೀಸಲಿರಿಸಿದ್ದು, ಹೆಚ್ಚುವರಿಯಾಗಿ ₹30 ಕೋಟಿ ಅನುದಾನ ನೀಡಬೇಕು ಎಂದು ಇಲಾಖೆ ಸಚಿವ ಶಿವರಾಜ ತಂಗಡಗಿಗೆ ಕನ್ನಡ ಸಾಹಿತ್ಯ ಪರಿಷತ್‍ನ ಬಳ್ಳಾರಿ, ಕೊಪ್ಪಳ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರಪ್ಪ ಹಾಗೂ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ನೇತೃತ್ವದ ತಂಡ ಈಚೆಗೆ ಅವರ ನಿವಾಸದಲ್ಲಿ ಮನವಿ ಸಲ್ಲಿಸಿ, ಒತ್ತಾಯಿಸಿದರು.

ಬಳಿಕ ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ರುದ್ರಪ್ಪ ನಿಷ್ಠಿ ಮಾತನಾಡಿ,‘ಈ ವರ್ಷದ ಡಿಸೆಂಬರ್‌ನಲ್ಲಿ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬಳ್ಳಾರಿ ಮತ್ತು ವಿಜಯನಗರ  ಜಿಲ್ಲೆಗಳನ್ನೊಳಗೊಂಡಂತೆ, ಗಡಿ ಜಿಲ್ಲೆಯಾಗಿರುವುದರಿಂದ ಆಂಧ್ರಪ್ರದೇಶ, ತೆಲಂಗಾಣ ಸಹಿತ ಇತರೆಡೆಯ ಅಂದಾಜು 13 ಲಕ್ಷಕ್ಕೂ ಹೆಚ್ಚಿನ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಖರ್ಚು, ವೆಚ್ಚಗಳು ಅನೇಕ ಪಟ್ಟು ಹೆಚ್ಚಾಗಲಿವೆ. ಮೀಸಲಿಟ್ಟ ಹಣ ಯಾತಕ್ಕೂ ಸಾಲದು, ಹೆಚ್ಚುವರಿ ₹30 ಕೋಟಿ ನೀಡಿದರೆ ಯಶಸ್ವಿ ಸಮ್ಮೇಳನ ನಡೆಸಲು ಸಾಧ್ಯ. ಇದೇ ವಿಷಯವನ್ನು ಸಚಿವರಿಗೆ ಮನವರಿಕೆ ಮಾಡಿದ್ದೇವೆ’ ಎಂದರು.

ಸಚಿವ ತಂಗಡಗಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದ ಪೂರ್ವಸಿದ್ಧತಾ ಸಭೆಯಲ್ಲಿ ವಿಷಯವನ್ನು ಅವರ ಗಮನಕ್ಕೆ ತಂದು ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ನೀಡಿದ್ದಾರೆ ಎಂದವರು ತಿಳಿಸಿದರು.

ADVERTISEMENT

ಕಾರಟಗಿ ತಾಲ್ಲೂಕು ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಬಳ್ಳಾರಿ ಜಿಲ್ಲಾ ಸಂಚಾಲಕ ಕಪಗಲ್ ಚಂದ್ರಶೇಖರ ಆಚಾರ್, ಸಂಘಟನಾ ಕಾರ್ಯದರ್ಶಿ ಸಿದ್ದರಾಮ ಸಿರಿಗೇರಿ, ವೀರೇಶ, ಇತರ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.