ಕುಷ್ಟಗಿ: ‘ಕೂಡಲಸಂಗಮದ್ದೇ ಪಂಚಮಸಾಲಿ ಮೂಲ ಪೀಠವಾಗಿದೆ. ಭಕ್ತರ ಅಪೇಕ್ಷೆಯೂ ಅದೇ ಆಗಿದೆ. ಆದರೆ, ಪೀಠ ತ್ಯಜಿಸುವ ಅಥವಾ ಪ್ರತ್ಯೇಕ ಪೀಠದ ಕುರಿತು ನಾನು ಮಾತನಾಡುವುದಿಲ್ಲ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶನಿವಾರ ಪಟ್ಟಣದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತಮ್ಮ ಹಾಗೂ ವೀರಶೈವ ಲಿಂಗಾಯತ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ನಡುವಿನ ಹೇಳಿಕೆ, ಟೀಕೆಗಳ ಕುರಿತು ಪ್ರತಿಕ್ರಿಸಲು ನಿರಾಕರಿಸಿದ ಶ್ರೀಗಳು, ‘ಅವರೂ ಭಕ್ತರೆಂದು ತಿಳಿದು ಏನೇ ಮಾತನಾಡಿದರೂ ಟೀಕೆಗಳನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ’ ಎಂದು ಹೇಳಿದರು.
‘ಇತ್ತೀಚಿನ ಬೆಳವಣಿಗೆಗಳಿಂದ ನಾನು ವಿಚಲಿತನಾಗಿಲ್ಲ. ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿಕೊಂಡು ಹೋಗುವ ಶಕ್ತಿ ಪಂಚಮಸಾಲಿ ಸಮಾಜಕ್ಕೆ ಇದೆ. ಮುಂದಿನ ದಿನಗಳಲ್ಲಿ ಭಕ್ತರು, ಸಮಾಜದ ಆಶಯದಂತೆ ನಡೆದುಕೊಳ್ಳಲಾಗುತ್ತದೆ. ಯಾವುದೇ ಗೊಂದಲಗಳು ಇಲ್ಲ’ ಎಂದರು.
ಸ್ವಾಮೀಜಿ ಆಸ್ಪತ್ರೆ ಸೇರಿದ್ದೂ ನಾಟಕ ಎಂಬ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಯಲ್ಲಿದ್ದೆ. ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವ ಗುರಿ ಮಾತ್ರ ನಮ್ಮ ಮುಂದಿದೆ. ಹೋರಾಟದ ಹಾದಿಯಲ್ಲಿ ಎದುರಾಗುವ ಎಲ್ಲ ತೊಂದರೆಗಳನ್ನು ಎದುರಿಸಿ ಗುರಿ ತಲುಪುವ ಪ್ರಯತ್ನ ನಡೆಸುತ್ತೇನೆ’ ಎಂದರು.
‘ನಾನು ಆಸ್ಪತ್ರೆಯಲ್ಲಿ ಇದ್ದಿದ್ದರಿಂದ ಪ್ರತ್ಯೇಕ ಪೀಠ ಸ್ಥಾಪನೆ ಅಥವಾ ಹಾಲಿ ಪೀಠ ತ್ಯಜಿಸುವುದಾಗಿ ಹೇಳಿದ ಯಾವ ವಿಚಾರವೂ ಗಮನಕ್ಕೆ ಬಂದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.