ADVERTISEMENT

ಬಯಲಾಟ ಕಲಾವಿದ ಶಂಕರಪ್ಪ ಹೊರಪೇಟೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 15:42 IST
Last Updated 11 ಫೆಬ್ರುವರಿ 2023, 15:42 IST
   

ಅಳವಂಡಿ (ಕೊಪ್ಪಳ ಜಿಲ್ಲೆ): ಬದುಕಿನುದ್ದಕ್ಕೂ ಕಲೆಯನ್ನೇ ಜೀವಾಳವಾಗಿರಿಸಿಕೊಂಡಿದ್ದ ಕೊಪ್ಪಳ ತಾಲ್ಲೂಕಿನ ಬೆಟಗೇರಿ ಸಮೀಪದ ಮೋರನಾಳ ಗ್ರಾಮದ ಬಯಲಾಟ ಕಲಾವಿದ ಶಂಕರಪ್ಪ ಹೊರಪೇಟೆ (63) ಹೃದಯ ಸಂಬಂಧಿತ ಸಮಸ್ಯೆಯಿಂದ ಶನಿವಾರ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌)ಗೆ ದಾಖಲಿಸಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಭಾನುವಾರ ಸ್ವಗ್ರಾಮ ಮೋರನಾಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಶಂಕರಪ್ಪ ಹಾರ್ಮೋನಿಯಂ ಕಲಾವಿದರೂ ಆಗಿದ್ದರು. ಬಡ ಕುಟುಂಬದಲ್ಲಿ ಮಲ್ಲಪ್ಪ– ಮರಿಯಮ್ಮ ದಂಪತಿಯ ಮಗನಾದ ಜನಿಸಿದ ಅವರು ಓದಿದ್ದು ನಾಲ್ಕನೇ ತರಗತಿ ಮಾತ್ರ. ಗ್ರಾಮೀಣ ಪ್ರದೇಶದದಲ್ಲಿದ್ದ ಕಲಾ ಪ್ರೀತಿಯಿಂದಾಗಿ ಬಾಲ್ಯದಿಂದ ಭಜನೆ ಹಾಗೂ ಬಯಲಾಟಕ್ಕೆ ಒತ್ತು ನೀಡಿದರು. ಬಯಲಾಟಗಳ ಪ್ರದರ್ಶನಗಳನ್ನು ಕಂಡು ಆನಂದಿಸಿ ರಂಗಪ್ರವೇಶ ಮಾಡಿದರು.

ADVERTISEMENT

ಸುಮಧುರ ಕಂಠ ಮಾಧುರ್ಯ ಹೊಂದಿದ್ದ ಅವರು ವಿವಿಧ ದೊಡ್ಡಾಟಗಳಲ್ಲಿ ಭೀಮಾ, ಆಂಜನೇಯ, ಲವಕುಶ, ಸೀತಾದೇವಿ ಹೀಗೆ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿರಾಟ ಪರ್ವ, ಲವಕುಶ ಕಾಳಗ, ಐರಾವಣ ಮೈರಾವಣ, ದೇವಿ ಮಹಾತ್ಮೆ, ರಾಮಾಂಜನೇಯ ಯುದ್ಧ, ಕುಶಲವರ ಕಾಳಗ, ದ್ರೋಣ, ಅರಾಣರ್ಜುನ ಕಾಳಗ, ಪಾಡು ವಿಜಯ ಸೇರಿದಂತೆ ಅನೇಕ ಬಯಲಾಟಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ. 180 ಬಯಲಾಟ ಪ್ರದರ್ಶನಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಯುವ ಕಲಾವಿದರಿಗೆ ಬಯಲಾಟಗಳ ಮಾರ್ಗದರ್ಶನ ನೀಡುತ್ತಿರುವ ಅವರು ಕಲಾಸೇವೆ ಗುರುತಿಸಿ ವಿವಿಧ ಪ್ರಶಸ್ತಿಗಳು ಬಂದಿವೆ. 2018ರಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ದೊರೆತಿದೆ. 2022ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.