ADVERTISEMENT

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ: ತಹಶೀಲ್ದಾರ್‌ ನಾಗರಾಜ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:50 IST
Last Updated 2 ಮೇ 2025, 15:50 IST
ಗಂಗಾವತಿ ಮಂಥನ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ದಿಂದ ಶುಕ್ರವಾರ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಕುರಿತು ತಾಲ್ಲೂಕು ವಿಪತ್ತು ನಿರ್ವಹಣೆ ಸಮಿತಿ ಸಭೆ ಜರುಗಿತು
ಗಂಗಾವತಿ ಮಂಥನ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ದಿಂದ ಶುಕ್ರವಾರ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಕುರಿತು ತಾಲ್ಲೂಕು ವಿಪತ್ತು ನಿರ್ವಹಣೆ ಸಮಿತಿ ಸಭೆ ಜರುಗಿತು   

ಗಂಗಾವತಿ: ತಾಲ್ಲೂಕಿನ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,ಆಯಾ ಗ್ರಾ.ಪಂ ಪಿಡಿಒಗಳು ಗ್ರಾಮೀಣ ಭಾಗದ ಜನರಿಗೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್‌ ಯು.ನಾಗರಾಜ ಸೂಚನೆ ನೀಡಿದರು.

ನಗರದ ತಾ.ಪಂ ಮಂಥನ ಸಭಾಂಗಣದಲ್ಲಿ‌ ಶುಕ್ರವಾರ ನಡೆದ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಕುರಿತ ತಾಲ್ಲೂಕು ವಿಪತ್ತು ನಿರ್ವಹಣೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಹೊರವಲಯದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು, ಗ್ರಾ.ಪಂ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ನೀರಿನ ಪೂರೈಕೆ ಬಗ್ಗೆ ಪರಿಶೀಲನೆ ನಡೆಸಬೇಕು. ಜನರನ್ನು ಸಂಪರ್ಕಿಸಿ ನೀರಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಜಾನುವಾರುಗಳಿಗೆ ನೀರು, ಮೇವು ಪೂರೈಕೆ ಜೊತೆಗೆ‌ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಪೂರಕ ಮಾಹಿತಿ ಪಡೆದು, ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದರು.

ADVERTISEMENT

ನಂತರ ತಾ.ಪಂ ಇಒ ರಾಮರೆಡ್ಡಿ ಪಾಟೀಲ ಮಾತನಾಡಿ, ‘ಈ ವಾರದಲ್ಲಿ ನೀರಿನ ಸಮಸ್ಯೆ ಎದುರಾಗುವ ಎಲ್ಲ ಗ್ರಾಮಗಳಲ್ಲಿ ನೀರು ಪೂರೈಸಲು ಸರ್ಕಾರ ಇಲ್ಲವೇ,‌ ಖಾಸಗಿ ಬೋರ್‌ವೆಲ್‌ಗಳನ್ನ ತೆಗೆದುಕೊಳ್ಳಿ. ಬರಿ ನೀರಿನ ಸಮಸ್ಯೆಯಿದೆ ಎಂದು ಅಧಿಕಾರಿಗಳಿಗೆ ಹೇಳುವಂತಿಲ್ಲ. ಬೋರ್‌ವೆಲ್ ಪಡೆಯುವ ವಿಚಾರದಲ್ಲಿ ಪಿಡಿಒಗಳಿಗೆ ಯಾರ ಅನುಮತಿಯೂ ಬೇಕಾಗಿಲ್ಲ’ ಎಂದರು.

ನಂತರ ಮರಳಿ ಗ್ರಾ.ಪಂ ಪಿಡಿಒ ಬಸವರಾಜ, ಕೆಸರಹಟ್ಟಿ ಗ್ರಾ.ಪಂ ಪಿಡಿಒ ಶಂಶೀರ್ ಅಲಿ, ಸಾಣಾಪುರ ಗ್ರಾ.ಪಂ ಪಿಡಿಒ ವತ್ಸಲಾ ಮಾತನಾಡಿ ಸಮಸ್ಯೆಗಳನ್ನು ಹೇಳಿಕೊಂಡರು.

ಚಿಕ್ಕಬೆಣಕಲ್, ಆಗೋಲಿ, ವಡ್ಡರಹಟ್ಟಿ ಗ್ರಾ. ಪಂ ಪಿಡಿಒಗಳು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ತಲಾ 3 ಖಾಸಗಿ ಬೋರ್‌ವೆಲ್ ಪಡೆದಿರುವ ಬಗ್ಗೆ ಮಾಹಿತಿ ನೀಡಿದರು

ಈ ವೇಳೆ ತಾಲ್ಲೂಕು ಆಡಳಿತ ಸಿಬ್ಬಂದಿ ಹಾಗೂ ಗ್ರಾ.ಪಂ ಪಿಡಿಒಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.