ADVERTISEMENT

'ದೇವರು ಕಳೆದಿವೆ ಹುಡುಕಿ ಕೊಡಿ’ ಪುಸ್ತಕ ಬಿಡುಗಡೆ

‘ಕೆಂಚರಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 1:20 IST
Last Updated 15 ಆಗಸ್ಟ್ 2021, 1:20 IST
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ  ಶನಿವಾರ ಡಾ.ಸಂಗಮೇಶ ಪಾಟೀಲ ಅವರ 'ದೇವರು ಕಳೆದಿವೆ ಹುಡುಕಿ ಕೊಡಿ' ಕವನ ಸಂಕಲನವನ್ನು ಬಂಡಾಯ ಸಾಹಿತಿ ಅಲ್ಲಮಪ್ರಭು ಪಾಟೀಲ ಬೆಟ್ಟದೂರ ಬಿಡುಗಡೆ ಮಾಡಿದರು. ಫಕೀರೇಶ ಎಮ್ಮಿ, ಈಶ್ವರ ಹತ್ತಿ, ಫಾ.ಸಲ್ವಾದೊರೈ, ಮಹಾಂತೇಶ ಮಲ್ಲನಗೌಡರ, ಬಿ.ಎ.ಕೆಂಚರಡ್ಡಿ, ಫಾದರ್ ಬಿನೋಯ್, ಡಾ.ಸಂಗಮೇಶ್ವರ ಇದ್ದರು
ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ  ಶನಿವಾರ ಡಾ.ಸಂಗಮೇಶ ಪಾಟೀಲ ಅವರ 'ದೇವರು ಕಳೆದಿವೆ ಹುಡುಕಿ ಕೊಡಿ' ಕವನ ಸಂಕಲನವನ್ನು ಬಂಡಾಯ ಸಾಹಿತಿ ಅಲ್ಲಮಪ್ರಭು ಪಾಟೀಲ ಬೆಟ್ಟದೂರ ಬಿಡುಗಡೆ ಮಾಡಿದರು. ಫಕೀರೇಶ ಎಮ್ಮಿ, ಈಶ್ವರ ಹತ್ತಿ, ಫಾ.ಸಲ್ವಾದೊರೈ, ಮಹಾಂತೇಶ ಮಲ್ಲನಗೌಡರ, ಬಿ.ಎ.ಕೆಂಚರಡ್ಡಿ, ಫಾದರ್ ಬಿನೋಯ್, ಡಾ.ಸಂಗಮೇಶ್ವರ ಇದ್ದರು   

ಕೊಪ್ಪಳ: ‘ಪ್ರಸ್ತುತ ಬಿಗುಮಾನದ ಸಂದರ್ಭದಲ್ಲಿ ಡಾಂಭಿಕ ಭಕ್ತಿಯನ್ನು ವಿರೋಧಿಸುವ ವೈಚಾರಿಕತೆಯನ್ನು ಪಸರಿಸುವ, ಪ್ರೀತಿ, ಸೌಹಾರ್ದ, ಸುವಿಚಾರ ಮೌಲ್ಯ ಪ್ರತಿಪಾದಿಸುವ ಕೃತಿಗಳು ಹೆಚ್ಚು ಬರಬೇಕಿದೆ’ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಪಾಟೀಲ ಬೆಟ್ಟದೂರ ಹೇಳಿದರು.

ಅವರು ಶನಿವಾರ ಭಾಗ್ಯನಗರದಲ್ಲಿ ಡಾ.ಸಂಗಮೇಶ್ವರ ಪಾಟೀಲ ಅವರ ‘ದೇವರು ಕಳೆದಿವೆ ಹುಡುಕಿ ಕೊಡಿ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ನಮ್ಮ ಅಧ್ಯಾಪನ ವೃತ್ತಿಯಲ್ಲಿ ಎರಡೇ ವರ್ಗದ ವಿದ್ಯಾರ್ಥಿಗಳು ನೆನಪಿನಲ್ಲಿ ಉಳಿದಿದ್ದಾರೆ. ಅವರಲ್ಲಿ ಕ್ರಿಯಾಶೀಲರು, ಸಂಪನ್ನರು ಆದರೆ ಗದ್ದಲ ಮಾಡುವ ವಿದ್ಯಾರ್ಥಿಗಳು. ಇದರಲ್ಲಿ ಪಾಟೀಲ ಕ್ರಿಯಾಶೀಲ ಸಾಹಿತಿ ಆಗಿದ್ದು, ಅನೇಕ ಉತ್ತಮ ಕೃತಿಗಳು ಮೂಡಿ ಬರಲಿ ಎಂದು ಹಾರೈಸಿದರು.

ADVERTISEMENT

ಕೃತಿ ಕುರಿತು ಮಾತನಾಡಿದ ಗಜೇಂದ್ರಗಡದ ನಿವೃತ್ತ ಉಪನ್ಯಾಸಕ ಪ್ರೊ.ಬಿ.ಎ.ಕೆಂಚರಡ್ಡಿ, ಒಬ್ಬ ಕವಿಅಳಿದ ಮೇಲೆ ಸಾವಿರ ಕವಿತೆ ಉಳಿದರೆ ಆತ ಮಹಾಕವಿ. ಬೆರಳಣಿಕೆಯಲ್ಲಿ ಉಳಿದರೆ ಆತ ಶ್ರೇಷ್ಠ ಕವಿ. ಒಂದೇ ಕವಿತೆ ಉಳಿದರೆ ಆತ ಕವಿ. ಹೀಗಾಗಿ ಕವಿಯಾಗುವುದು ಕಷ್ಟದ ಕೆಲಸ. ಇಲ್ಲಿನ ಪರಿಸರ ಉತ್ತಮ ಸಾಹಿತ್ಯ ರಚನೆಗೆ ವಾತಾವರಣ ಒದಗಿಸಿದೆ. ಡಾ.ಪಾಟೀಲ ತಮ್ಮ ಕವನಗಳ ಮೂಲಕ ಸಾರಸ್ವತಲೋಕದಲ್ಲಿ ಈಗ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಕವನ ಸಂಕಲನದ ಎಲ್ಲ ಕವಿತೆಗಳ ತಾತ್ಪಾರ್ಯಗಳ ಕುರಿತು ಕವಿ ಕಲ್ಪನೆ ಮತ್ತು ಒಳನೋಟದ ಕುರಿತು ಸಮಗ್ರವಾಗಿ ಮಾತನಾಡಿದರು.

ಹಿರಿಯ ಸಾಹಿತಿ ಈಶ್ವರ ಹತ್ತಿ ಮಾತನಾಡಿ, ದೇವರು ಕಳೆದರೆ ಪೊಲೀಸರಿಗೆ ದೂರು ನೀಡಬೇಕು. ಆದರೆ ಕವಿ ಕವಿತೆ ಬರೆದಿದ್ದಾನೆ ಎಂದರೆ ಚಿಂತನೆಗೆ ಹಚ್ಚಬೇಕು. ಕಲ್ಲು, ಮರ, ಲೋಹಗಳು ದೇವರು ದೇವರಲ್ಲ. ನಮ್ಮೊಳಗಿನ ಆತ್ಮಸಾಕ್ಷಿ, ಕರುಣೆಯೇ ದೇವರು. ದೇವರ ಬಗ್ಗೆ ಅನೇಕ ಜಿಜ್ಞಾಸೆಗಳು ಅಧ್ಯಾತ್ಮದ ಪರಂಪರೆಯಲ್ಲಿ ಬಂದಿವೆ. ಮನುಷ್ಯನ ಅಂತರಂಗದ ಅರಿವೇ ದೇವರು ಎಂಬ ಧ್ವನಿಯನ್ನು ಈ ಸಂಕಲನ ಧ್ವನಿಸುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಾಂತೇಶ ಮಲ್ಲನಗೌಡರ ಮಾತನಾಡಿ, ದೇವರು ಇದ್ದಾನೆ ಎಂಬ ಆಸ್ತಿಕರು ಹುಟ್ಟಿದ ವರ್ಷದಲ್ಲಿಯೇ, ದೇವರು ಇಲ್ಲ ಎಂಬ ಚಾರ್ವಾಕರ ನಾಡು ನಮ್ಮದು. ಅಲ್ಲಿಂದ ಇಲ್ಲಿಯವರೆಗೆ ಇದ್ದಾನೆ, ಇಲ್ಲವೋ ಎಂಬ ತರ್ಕ ನಡೆಯುತ್ತಲೇ ಇದೆ. ದೇವರಗಳನ್ನು ಕದ್ದವರು ನಾವೇ, ಅದಕ್ಕೆ ಪರಿಹಾರ ಹುಡುಕಬೇಕಾದವರು ನಾವೇ ಎಂದು ಹೇಳಿದರು.

ಎಸ್‌ಎಫ್‌ಎಸ್‌ ಶಾಲೆಯ ಪ್ರಾಚಾರ್ಯ ರೆವೆರೆಂಡ್‌ ಫಾದರ್ ಬಿನೋಯ್‌, ಸಾಲ್ವದೊರೈ ಆಶೀರ್ವಚನ ನೀಡಿದರು. ಕೃತಿ ರಚನೆಕಾರ ಡಾ.ಸಂಗಮೇಶ್ವರ ಪಾಟೀಲ ಕಾವ್ಯ ಕಟ್ಟುವಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು.

ಫಕೀರೇಶ ಎಮ್ಮಿಯವರ ನಿರೂಪಿಸಿದರು. ಅಕ್ಬರ್ ಸಿ ಕಾಲಿಮಿರ್ಚಿ ಸ್ವಾಗತಿಸಿದರು ಹಾಗೂ ಎಂ.ಎಂ.ಮದರಿ, ಡಾ.ಡಿ.ಎಂ.ಬಡಿಗೇರ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.