ಕುಷ್ಟಗಿ: ‘ದೈವಿಕ ಶ್ರದ್ಧೆ ಮತ್ತು ಭಕ್ತಿ ಅಳವಡಿಸಿಕೊಂಡರೆ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಲು ಮತ್ತು ಸಮಾಜ ಸುಧಾರಣೆಯ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ’ ಎಂದು ಮದ್ದಾನೇಶ್ವರ ಹಿರೇಮಠದ ಕರಿಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ವರ್ತಕರ ಸಂಘದ ವತಿಯಿಂದ ನಿರ್ಮಿಸಲಾದ ವರಸಿದ್ಧಿ ವಿನಾಯಕ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ವರ್ತಕ ಸಂಘದ ಕಚೇರಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಳೆದ ಮೂರೂವರೆ ದಶಕಗಳಿಂದಲೂ ಎಪಿಎಂಸಿ ವರ್ತಕರು ಜಾತಿ, ಧರ್ಮಗಳನ್ನು ದೂರ ಇರಿಸಿ ಗಣೇಶೋತ್ಸವವನ್ನು ಭಕ್ತಿಯಿಂದ ಆಚರಿಸುತ್ತ ಬಂದಿದ್ದಾರೆ. ಈಗ ವರಸಿದ್ಧಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಭಕ್ತಿ ಭಾವ ಮೆರೆದಿದ್ದಾರೆ ಎಂದರು.
ಬದುಕು ನಶ್ವರವಾದರೂ ನಾವು ಮಾಡುವ ಕೆಲಸ ಕಾರ್ಯಗಳು ಶಾಶ್ವತವಾಗಿರುತ್ತವೆ. ಯಾವುದು ಒಳ್ಳೆಯ ದಾರಿ ಎಂಬುದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು. ಸದ್ಗುಣಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಶಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥಿಸಬೇಕೆ ಹೊರತು ಸಂಪತ್ತು, ಐಶ್ವರ್ಯಕ್ಕಾಗಿ ಅಲ್ಲ. ಅವುಗಳನ್ನು ದಯಪಾಲಿಸುವುದಿಲ್ಲ ಎಂಬುದನ್ನೂ ನೆನಪಿನಲ್ಲಿಡಬೇಕು. ಕಾಯಕತತ್ವದಿಂದ ಬದುಕು ರೂಪಿಸಿಕೊಂಡರೆ ಸಮಾಜದ ಋಣಭಾರ ಇಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಮಾತನಾಡಿ,‘ಮಳೆ, ಬೆಳೆ ಚೆನ್ನಾಗಿದ್ದರೆ ಮಾತ್ರ ವರ್ತಕರ ಸ್ಥಿತಿ ಉತ್ತಮವಾಗಿರುತ್ತದೆ. ಹೀಗಿದ್ದರೂ ರೈತರ ಬೇಕು ಬೇಡಿಕೆಗಳಿಗೆ ಸ್ಪಂದಿಸುವುದು, ಕೃಷಿ ಉತ್ಪನ್ನಗಳಿಗೆ ಉತ್ತಮ ದರ ಕೊಡಿಸುವ ಮೂಲಕ ರೈತರ ಹಿತ ಕಾಪಾಡುವುದನ್ನು ಮಾತ್ರ ಎಂದಿಗೂ ಮರೆತವರಲ್ಲ. ಬೇರೆ ಸಮಿತಿಗಳಿಗೆ ಹೋಲಿಸಿದರೆ ಇಲ್ಲಿಯ ಎಪಿಎಂಸಿಯಲ್ಲಿನ ವ್ಯಾಪಾರ ವಹಿವಾಟಿನ ರೀತಿ ನೀತಿಗಳು ಮಾದರಿಯಾಗಿವೆ’ ಎಂದರು.
ಪ್ರಮುಖ ವರ್ತಕರಾದ ಶಶಿಧರ ಕವಲಿ, ಲಾಡಸಾಬ್ ಕೊಳ್ಳಿ, ಶರಣಬಸವೇಶ್ವರ ಗಂಜ್ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ಇತರರು ಮಾತನಾಡಿದರು. ನಿಡಶೇಸಿಯ ಚನ್ನಬಸವ ಸ್ವಾಮೀಜಿ, ಬಿಜಕಲ್ ಶಿವಲಿಂಗ ಸ್ವಾಮೀಜಿ, ಶಾಖಾಪುರ ಆಶ್ರಮದ ಸಹದೇವಾನಂದ ನಾಗಾಸಾಧು ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ವಿಜಯಕುಮಾರ ಬಿರಾದಾರ, ಹನಮೇಶಪ್ಪ, ಚನ್ನಪ್ಪ ಚಟ್ಟೇರ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಮಹೇಶ ಇದ್ದರು.
ವರಸಿದ್ಧಿ ವಿನಾಯಕ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಜಗದೀಶಶಾಸ್ತ್ರಿ ವಿಭೂತಿಮಠ ನೇತೃತ್ವದಲ್ಲಿ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ ಮತ್ತು ನಾಣ್ಯಾಧಿವಾಸ, ಶಯನಾದಿವಾಸ, ರುದ್ರಾಭಿಷೇಕ, ನವಗ್ರಹ ಪೂಜೆ, ಹೋಮ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಎಪಿಎಂಸಿಯ ಎಲ್ಲ ವರ್ತಕರು, ಕಚೇರಿ ಸಿಬ್ಬಂದಿ, ಪಟ್ಟಣದ ಅನೇಕ ಪ್ರಮುಖರು, ಚಾಮುಂಡೇಶ್ವರಿ ಶ್ರಮಿಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.