ADVERTISEMENT

ಕನಕಗಿರಿಯಲ್ಲಿ 'ಭಾರತ್‌ ಬಂದ್‌‌' ಸಂಪೂರ್ಣ ಯಶಸ್ವಿ

ರೈತ ಸಂಘಟನೆ ಕಾರ್ಯಕರ್ತರಿಂದ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 11:08 IST
Last Updated 8 ಡಿಸೆಂಬರ್ 2020, 11:08 IST
ಕನಕಗಿರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು
ಕನಕಗಿರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು   

ಕನಕಗಿರಿ: ನೂತನ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ಮಂಗಳವಾರ ನಡೆದ ‘ಭಾರತ ಬಂದ್‌’ ಇಲ್ಲಿ ಯಶಸ್ವಿಯಾಯಿತು.

ರೈತ ಸಂಘಟನೆ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬಂದ್ ಕುರಿತು ಡಂಗೂರ ಸಾರಿ ಜಾಗೃತಿ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಂಗಡಿ–ಮುಂಗಟ್ಟು, ಹೋಟೆಲ್‌, ಖಾನಾವಳಿಗಳನ್ನು ಬಂದ್ ಮಾಡಲಾಗಿತ್ತು.

ಶಾಲಾ ಕಾಲೇಜುಗಳು, ಬ್ಯಾಂಕ್ ಸೇರಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬಸ್ ನಿಲ್ದಾಣದಲ್ಲಿ ಜನಸಂಖ್ಯೆ ವಿರಳವಾಗಿದ್ದರೂ ಬಸ್ ಸಂಚಾರ ಸುಗಮವಾಗಿತ್ತು.

ADVERTISEMENT

ರೈತ ಸಂಘಟನೆ ಕಾರ್ಯಕರ್ತರು ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಕೂಗಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ವಾಹನ ಸವಾರರು ತಮ್ಮ ತಮ್ಮ ಊರು ತಲುಪಲು ಪರದಾಡಬೇಕಾಯಿತು.

ವಿಧಿ ಇಲ್ಲದೆ ಹಳೆ ತಾವರಗೇರಾ ರಸ್ತೆ ಮೂಲಕ ಬಸ್ ಇತರೆ ವಾಹನಗಳು ಸಂಚರಿಸಿದವು.

ಭಾರತ ಬಂದ್ ಪ್ರತಿಭಟನೆಗೆ ಕಾಂಗ್ರೆಸ್ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದರೂ ಇಲ್ಲಿನ ಯಾವ ಕಾರ್ಯಕರ್ತರು, ಕಾಂಗ್ರೆಸ್ ಜನಪ್ರತಿನಿಧಿಗಳು ಸಹ ಭಾಗವಹಿಸಲಿಲ್ಲ.

ರೈತ ಸಂಘಟನೆ ಅಧ್ಯಕ್ಷ ಗಣೇಶರೆಡ್ಡಿ, ಮಾಜಿ ಅಧ್ಯಕ್ಷ ಉಮಾಕಾಂತ ದೇಸಾಯಿ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸಗರಪ್ಪ ಕಂಪ್ಲಿ, ಪ್ರಮುಖರಾದ ಜಯಪ್ರಕಾಶ ರಡ್ಡಿ ಮಾದಿನಾಳ, ಹುಸೇನಸಾಬ ಶಾರದ, ವಿವಿಧ ಹೋಬಳಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.