ADVERTISEMENT

ವ್ಯವಹಾರಕ್ಕಾಗಿ ಅಧಿಕಾರಕ್ಕೆ ಬಂದ ಬಿಜೆಪಿ ಅದನ್ನೇ ಮಾಡುತ್ತಿದೆ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 8:28 IST
Last Updated 7 ಅಕ್ಟೋಬರ್ 2022, 8:28 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಕೊಪ್ಪಳ: ಜನರ ಭಾವನೆ ಹಾಗೂ ಆಶೋತ್ತರಗಳನ್ನು ಮರೆತು ವ್ಯವಹಾರ ಮಾಡುವ ಉದ್ದೇಶದಿಂದ ಅಧಿಕಾರಕ್ಕೆ ಬಂದ ಬಿಜೆಪಿಯವರು ಇಷ್ಟು ವರ್ಷಗಳ ಆಡಳಿತದಲ್ಲಿ ವ್ಯವಹಾರವನ್ನೇ ಮಾಡಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.

ಜಿಲ್ಲೆಯ ಆರ್ಯ ಈಡಿಗ ಸಂಘ ನಗರದಲ್ಲಿ ಹಮ್ಮಿಕೊಂಡಿದ್ದ
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮಕ್ಕೂ ಮೊದಲು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‌ಅವರು ಬಿಜೆಪಿ ಆಡಳಿತ ವೈಖರಿಗೆ ಜನ ರೋಸಿ ಹೋಗಿದ್ದಾರೆ. ಜಾತಿ ಹಾಗೂ ದ್ವೇಷದ ರಾಜಕಾರಣ ಮಾಡುವವರಿಂದ ನಾವು ಬುದ್ದಿ ‌ಮಾತು ಹೇಳಿಸಿಕೊಳ್ಳುವುದು ಬೇಕಿಲ್ಲ‌. ಬಿಜೆಪಿಯನ್ನು ಬೆಳೆಸಿದ ಆರ್ ಎಸ್ ಎಸ್ ಹಾಗೂ ಹಿಂದೂಪರ ಸಂಘಟನೆಗಳೇ ಈಗ ಆ ಪಕ್ಷವನ್ನು ವಿರೋಧಿಸುತ್ತಿವೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಟೀಕಿಸುವವರಿಗೆ ಭವಿಷ್ಯದ ರಾಜಕಾರಣದ ಅರಿವಿಲ್ಲ‌. ಭಾರತ್ ಜೋಡೊ ಯಾತ್ರೆಯ ಮೂಲಕ ಕಾಂಗ್ರೆಸ್ ದೇಶವನ್ನು ಒಂದು ಮಾಡುತ್ತಿದೆ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷದ ಶಕ್ತಿ ಎನೆಂಬುದು ಗೊತ್ತಾಗುತ್ತದೆ. ಪಕ್ಷದಲ್ಲಿ ನಾಯಕತ್ವದ ಬಗ್ಗೆ ವಿವಾದವೇ ಇಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಮಾತ್ರ ಸುದ್ದಿಯಾಗುತ್ತಿದೆ ಎಂದರು.

ADVERTISEMENT

ಹಿಂದುಳಿದ ವರ್ಗಗಳ ವಿಭಾಗದ ಮೂಲಕ ಕಾಂಗ್ರೆಸ್ ಪಕ್ಷವನ್ನು ‌ಬಲಪಡಿಸಲಾಗುವುದು‌. ಸದ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವಿಭಾಗದ ಪದಾಧಿಕಾರಿಗಳನ್ನು ವಿಸರ್ಜಿಸಲಾಗಿದ್ದು, ಭಾರತ್ ಜೋಡೊ ಯಾತ್ರೆ ಮುಗಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಸಮಾವೇಶ ನಡೆಸಿ ಹೊಸ ಸದಸ್ಯರನ್ನು ನೇಮಕ ಮಾಡಲಾಗುವುದು. ಬಳಿಕ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಭಾರತ್ ಜೋಡೊ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ದೇಶದ ಜನ ಅಭಿವೃದ್ಧಿ ಪರ ಇದ್ದಾರೆ. ಈ ಯಾತ್ರೆಯಿಂದ ದೊಡ್ಡ ರಾಜಕೀಯ ಬದಲಾವಣೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.