ADVERTISEMENT

ಸಾರ್ಥಕ ಬದುಕಿಗೆ ಸಮಾಜಸೇವೆ ಪೂರಕ: ಸಂಸದ ಸಂಗಣ್ಣ ಕರಡಿ

ನೇತ್ರ, ರಕ್ತದಾನ ಶಿಬಿರ: ಸ್ವಯಂ ನೇತ್ರದಾನ ನೋಂದಣಿಗೆ ಸಂಸದ ಸಂಗಣ್ಣ ಕರಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:02 IST
Last Updated 18 ಮೇ 2022, 4:02 IST
ಕುಷ್ಟಗಿಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ ಜನಾಬಾಯಿ ದತ್ತಣ್ಣ ನವಲೆ ಅವರಿಗೆ ಸಂಸದ ಸಂಗಣ್ಣ ಕರಡಿ ಪ್ರಮಾಣಪತ್ರ ವಿತರಿಸಿದರು. ಶಾಸಕ ಅಮರೇಗೌಡ ಬಯ್ಯಾಪುರ ಇದ್ದರು
ಕುಷ್ಟಗಿಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ ಜನಾಬಾಯಿ ದತ್ತಣ್ಣ ನವಲೆ ಅವರಿಗೆ ಸಂಸದ ಸಂಗಣ್ಣ ಕರಡಿ ಪ್ರಮಾಣಪತ್ರ ವಿತರಿಸಿದರು. ಶಾಸಕ ಅಮರೇಗೌಡ ಬಯ್ಯಾಪುರ ಇದ್ದರು   

ಕುಷ್ಟಗಿ: ‘ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ಯುವಕರನ್ನು ಸಾರ್ಥಕ ಬದುಕಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಪಟ್ಟಣದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಏರ್ಪಡಿಸಲಾಗಿದ್ದ ನೇತ್ರದಾನ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ‘ರಕ್ತ ಮತ್ತು ನೇತ್ರ ದಾನಗಳು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯಾಗಿವೆ. ವಿಪತ್ತು ಮತ್ತು ತುರ್ತು ಸಂದರ್ಭದಲ್ಲಿ ರಕ್ತಕ್ಕೆ ಹೆಚ್ಚು ಬೇಡಿಕೆ ಇರುತ್ತದೆ. ಹಾಗಾಗಿ ಅದರ ಮಹತ್ವ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ’ ಎಂದರು.

ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ‘ಹಿಂದಿನ ಕಾಲಘಟದಲ್ಲಿ ಅನ್ನದಾನ ಮತ್ತು ವಿದ್ಯಾದಾನ ಶ್ರೇಷ್ಠ ಎಂದೆ ಪರಿಗಣಿಸಲಾಗಿತ್ತು. ಆದರೆ ಈಗ ಇವರೆಡಕ್ಕೂ ತೊಂದರೆ ಇಲ್ಲ. ಪ್ರಸಕ್ತ ಕಾಲದಲ್ಲಿ ರಕ್ತದಾನ ಹೆಚ್ಚು ಶ್ರೇಷ್ಠತೆ ಹೊಂದಿದೆ. ಆದರೆ ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗದ ರಕ್ತವನ್ನು ದಾನ ಮಾಡುವ ಅಮೂಲ್ಯ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಬೇಕು. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿಯೂ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆಚ್ಚಿನ ರೀತಿಯಲ್ಲಿ ನಡೆಯಬೇಕಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ರೆಡ್‌ಕ್ರಾಸ್‌ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ವಿಜಯಕುಮಾರ ಬಿರಾದಾರ, ಸಂಸ್ಥೆಯ ಉಪಸಭಾಪತಿ ಗವಿಸಿದ್ದನ ಗೌಡ ಪಾಟೀಲ, ನೇತ್ರತಜ್ಞ ಡಾ.ಸುಶೀಲ್ ಕಾಖಂಡಕಿ, ದೇವೇಂದ್ರಪ್ಪ ಬಳೂಟಗಿ, ಇನ್ನರ್‌ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಶಾರದಾ ಶೆಟ್ಟರ ಮಾತನಾಡಿದರು.

ಪ್ರಾರಂಭದಲ್ಲಿ ಪುನಿತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಸಮರ್ಪಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ಡಾ.ರವಿಕುಮಾರ ದಾನಿ, ಶಂಕರ ಮಿಸ್ಕಿನ್, ಮಲ್ಲಿಕಾರ್ಜುನ ಬಳಿಗಾರ, ಐಡಿಎಫ್‌ಸಿ ಬ್ಯಾಂಕ್‌ ವ್ಯವಸ್ಥಾಪಕ ಎಂ.ಚನ್ನಬಸವ ಇದ್ದರು. ಪ್ರಯೋಗಾ ಲಯ ತಜ್ಞ ಬಾಲಾಜಿ ಬಳಿಗಾರ ನಿರೂಪಿಸಿದರು. ರಕ್ತದಾನ ಮಾಡಿದ ಮತ್ತು 76 ವರ್ಷದ ಜನಾಬಾಯಿ ನವಲೆ ಸೇರಿದಂತೆ ನೇತ್ರದಾನ ವಾಗ್ದಾನ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್‌ ಸಂಸ್ಥೆ, ಸಾಯಿ ಶಂಕರ ವಿಎಸ್‌ಎಸ್‌ಎನ್‌, ಕಾಖಂಡಕಿ ಕಣ್ಣಿನ ಆಸ್ಪತ್ರೆ, ಇನ್ನರ್‌ವ್ಹೀಲ್‌ ಕ್ಲಬ್, ಪುನಿತ್ ಅಭಿಮಾನಿಗಳ ಬಳಗ ಮತ್ತು ಐಡಿಎಫ್‌ಸಿ ಬ್ಯಾಂಕ್‌ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ನೇತ್ರದಾನಕ್ಕೆ ಹಿಂಜರಿಕೆ; ಡಾ.ಕಾಖಂಡಕಿ
ನೇತ್ರದಾನದ ಮಹತ್ವ ಕುರಿತು ಮಾಹಿತಿ ನೀಡಿದ ಡಾ.ಸುಶೀಲ್‌ ಕಾಖಂಡಕಿ, ದೇಶದಲ್ಲಿ ನೇತ್ರದಾನಿಗಳ ಸಂಖ್ಯೆ ತೀರಾ ಕನಿಷ್ಟ ಪ್ರಮಾಣಲ್ಲಿದೆ, ಪ್ರತಿವರ್ಷ ಸುಮಾರು 52 ಲಕ್ಷ ಜನರು ಅಂಧತ್ವಕ್ಕೆ ಸಂಬಂಧಿಸಿದ ಬೇರೆಬೇರೆ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ನೇತ್ರ ದಾನ ಮಾಡುವವರ ಸಂಖ್ಯೆ ಕೇವಲ 42 ಸಾವಿರ ಮಾತ್ರ. ವರ್ಷದ ಅವಧಿಯಲ್ಲಿ ಮೃತರಾಗುವವರ ಪೈಕಿ ಶೇಕಡ 10ರಷ್ಟು ಜನರ ಕಣ್ಣುಗಳನ್ನು ದಾನ ಮಾಡಿದರೂ ಅಂಧತ್ವ ನಿವಾರಣೆ ಮಾಡಲು ಸಾಧ್ಯವಿದೆ ಎಂದರು.

ಆದರೆ ಭಾವನಾತ್ಮಕ ಆಲೋಚನೆಗಳು, ತಪ್ಪು ಕಲ್ಪನೆ, ಮೂಢನಂಬಿಕೆಯಿಂದಾಗಿ ನೇತ್ರದಾನಕ್ಕೆ ಬಹುತೇಕ ಜನ ಮುಂದೆಬರುತ್ತಿಲ್ಲ ಎಂದು ವಿಷಾದಿಸಿದರು. ಈ ವಿಷಯದಲ್ಲಿ ಮಠಾಧೀಶರು, ಧಾರ್ಮಿಕ ಮುಖಂಡರು ಜನರಿಗೆ ಪ್ರೇರಣೆ ನೀಡುವ ಅಗತ್ಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.