ADVERTISEMENT

ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಇಬ್ಬರ ಪೈಪೋಟಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ: ಇಂದು ಮತದಾನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:53 IST
Last Updated 12 ಏಪ್ರಿಲ್ 2025, 15:53 IST

ಕೊಪ್ಪಳ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೊಪ್ಪಳ ಜಿಲ್ಲಾ ಪ್ರತಿನಿಧಿ ಮತ್ತು ರಾಜ್ಯದ ಅಧ್ಯಕ್ಷರನ್ನು ಆಯ್ಕೆ ಮಾಡಲು ಭಾನುವಾರ(ಏ.13) ಇಲ್ಲಿನ ಸರ್ಕಾರಿ ನೌಕರರ ಭವನದ ಎದುರು ಇರುವ ಬ್ರಾಹ್ಮಣ ಸದಾಚಾರ ಸದನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 4 ಗಂಟೆ ತನಕ ಮತದಾನ ಜರುಗಲಿದೆ.  ಒಟ್ಟು 1,190 ಮತದಾರರು ಇದ್ದು, ಮತದಾನದ ಬಳಿಕ ಮತ ಎಣಿಕೆ ನಡೆಯಲಿದೆ.

ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಸ್‌.ರಘುನಾಥ್‌ ಮತ್ತು ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿಯಾಗಿ ವಿ. ಭಾನುಪ್ರಕಾಶ ಶರ್ಮಾ ಸ್ಪರ್ಧೆ ಮಾಡಿದ್ದಾರೆ. ಜಿಲ್ಲೆಯ ಪ್ರತಿನಿಧಿ ಸ್ಥಾನಕ್ಕೆ ರಘುನಾಥ್‌ ಅವರ ಬಣದಿಂದ ಪ್ರಾಣೇಶ್ ಮಾದಿನೂರು ಹಾಗೂ ಭಾನುಪ್ರಕಾಶ ಶರ್ಮಾ ಅವರ ಬಣದಿಂದ ಗುರುರಾಜ ಜೋಶಿ ಕಣದಲ್ಲಿದ್ದು, ಒಂದು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ.  ಜಿಲ್ಲೆಯ ಪ್ರತಿ ಮತದಾರರು ಜಿಲ್ಲಾ ಪ್ರತಿನಿಧಿ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಗೆ ತಲಾ ಒಂದು ಮತ ಚಲಾಯಿಸಬೇಕಿದೆ.

ಎರಡೂ ಬಣಗಳ ಅಭ್ಯರ್ಥಿಗಳು ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಓಡಾಡಿ ಪ್ರಚಾರ ಮಾಡಿ ಮತದಾರರನ್ನು ಸೆಳೆಯಲು ಕಸರತ್ತು ಮಾಡಿದ್ದಾರೆ.

ADVERTISEMENT

ಇನ್ನೆರೆಡು ಜಿಲ್ಲೆ: ಬ್ರಾಹ್ಮಣ ಮಹಾಸಭಾ ಚುನಾವಣೆಗೆ ಮೊದಲ ಬಾರಿಗೆ ಕೊಪ್ಪಳದಲ್ಲಿ ಮತಕೇಂದ್ರ ಆರಂಭಿಸಲಾಗಿದೆ. ಮೊದಲು ನೆರೆಯ ಜಿಲ್ಲೆಗಳಿಗೆ ತೆರಳಿ ಮತದಾನ ಮಾಡಬೇಕಿತ್ತು. ನೆರೆಯ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜ್ಯಾಧ್ಯಕ್ಷರ ಆಯ್ಕೆಗೆ ಮಾತ್ರ ಇಲ್ಲಿನ ಸದಾಚಾರ ಸದನದಲ್ಲಿಯೇ ಭಾನುವಾರ ಮತದಾನ ನಡೆಯಲಿದೆ.

‘ಕೊಪ್ಪಳ ಜಿಲ್ಲೆಯ ಜಿಲ್ಲಾ ಪ್ರತಿನಿಧಿ ಮತ್ತು ರಾಜ್ಯಾಧ್ಯಕ್ಷರ ಆಯ್ಕೆಗೆ ಮತದಾನ, ಬಳ್ಳಾರಿ (225 ಮತದಾರರು) ಮತ್ತು ವಿಜಯನಗರ (358 ಮತದಾರರು) ರಾಜ್ಯಾಧ್ಯಕ್ಷರ ಆಯ್ಕೆಗೆ ಕೊಪ್ಪಳದಲ್ಲಿಯೇ ಮತದಾನ ನಡೆಯಲಿದೆ. ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಹಾಯಕ ಚುನಾವಣಾಧಿಕಾರಿ ಜೆ. ನಾಗರಾಜ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.