ತಾವರಗೇರಾ: ಇಲ್ಲಿನ ರಾಯನಕೆರೆ ಹಿನ್ನಿರಿನ ಕಾಲುವೆಯು ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಒಡೆದಿದ್ದು, ಅಪಾರ ಪ್ರಮಾಣದ ಕಾಲುವೆ ನೀರು ರೈತರ ಹೊಲ ಹಾಗೂ ಕೆರೆಗೆ ನುಗ್ಗಿದೆ.
ರಾಯನಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಕೆರೆಗೆ ನೀರು ಬರದಂತೆ ಕಾಲುವೆಗೆ ಒಡ್ಡು ನಿರ್ಮಿಸಿ ನೀರು ತಡೆ ಹಿಡಿಯಲಾಗಿತ್ತು. ಗುರುವಾರ ಸುರಿದ ಮಳೆಗೆ ಕಾಲುವೆ ನೀರನ್ನು ಕೆರೆಗೆ ಬಿಡಲು ಅಪರಿಚಿತರು ಗೇಟ್ ಕಿತ್ತಿರುವ ಪರಿಣಾಮ ಕೆರೆಗೆ ನೀರು ನುಗ್ಗಿದ್ದು, ಕಾಮಗಾರಿಗೆ ಅಡಚಣೆಯಾಗಿದೆ.
ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ರಾಜಶೇಖರ ಕಟ್ಟಿಮನಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಭಿಸಾಬ ಖುದನ್ನವರ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ರಾಜಶೇಖರ ಕಟ್ಟಿಮನಿ ಮಾತನಾಡಿ, ಕಳೆದ ಎರಡು ಮೂರು ದಿನಗಳಿಂದ ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಕೆರೆಯಲ್ಲಿ ಕೆಲಸ ನಡೆದ ಕಾರಣ ಕಾಲುವೆ ಗೇಟ್ ಬಂದ್ ಮಾಡಲಾಗಿತ್ತು. ಆದರೆ ಯಾರೊ ಗೇಟ್ ಕಿತ್ತಿರುವ ಕಾರಣ ಕೆರೆಗೆ ನೀರು ನುಗ್ಗಿದೆ. ನೀರು ತುಂಬಿದರೆ ಕಾಮಗಾರಿ ಅರ್ಧಕ್ಕೆ ನಿಂತು ಕಾಮಗಾರಿಗೆ ತೊಂದರೆಯಾಗಿದೆ ಎಂದರು.
ಸರ್ಕಾರ ಕೆರೆಯ ವಿವಿಧ ಕಾಮಗಾರಿ ಅಭಿವೃದ್ಧಿಗೆ ₹ 1 ಕೋಟಿ ಮಂಜೂರು ಮಾಡಿದ್ದು, ಕಾಮಗಾರಿಯನ್ನು 2023ರಲ್ಲೇ ಪೂರ್ಣಗೊಳಿಬೇಕಿತ್ತು. ಆದರೆ ಕೆರೆಯಲ್ಲಿ ನೀರು ಸಂಗ್ರಹವಾದ ಕಾರಣ ಕಾಮಗಾರಿ ನಡೆದಿಲ್ಲ. ಇತರೆ ಕೆಲಸ ಶೇ 90ರಷ್ಟು ಮುಗಿದಿದ್ದು, ಇನ್ನೂ 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.