ಅಪಘಾತ
–ಪ್ರಾತಿನಿಧಿಕ ಚಿತ್ರ
ಕೊಪ್ಪಳ: ಅಪಘಾತಕ್ಕೀಡಾದ ವಾಹನದ ದುರಸ್ತಿ ನಷ್ಟ ಪರಿಹಾರವನ್ನು ನೀಡಲು ನಿರಾಕರಿಸಿ ಸೇವಾ ನ್ಯೂನತೆ ಎಸಗಿದ ಹುಬ್ಬಳ್ಳಿಯ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿಗೆ ನಷ್ಟ ಪರಿಹಾರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ದೂರದಾರರಾದ ಮೊಹಮ್ಮದ್ ಅಲಿ ಎಂಬುವವರು ನರೇಂದ್ರ ರಾಜು ಜೆ. ಅವರಿಂದ ಕ್ರೇಟಾ ಕಾರನ್ನು ಖರೀದಿಸಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. 2024ರ ಸೆಪ್ಟೆಂಬರ್ 30ರಂದು ವೇಗವಾಗಿ ಬಂದ ಲಾರಿ ಚಾಲಕ ಮೊಹಮ್ಮದ್ ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಕಾರಿಗೆ ತೀವ್ರ ಹಾನಿಯಾಗಿತ್ತು. ಲಾರಿ ಚಾಲಕನ ವಿರುದ್ಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಅಪಘಾತದಿಂದಾದ ಹಾನಿಯ ಬಗ್ಗೆ ಮೊಹಮ್ಮದ್ ಎದುರುದಾರರಾದ ಕಂಪನಿಯ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದರಿಂದ ಕಂಪನಿ ಸರ್ವೆಯರ್ ಅನ್ನು ನೇಮಕ ಮಾಡಿ ಹಾನಿಗೊಳಗಾದ ವಾಹನ ದುರಸ್ತಿ ಮಾಡಲು ಶಿಫಾರಸು ಮಾಡಿದ್ದರು. ಹೊಸಪೇಟೆಯಲ್ಲಿ ಕಾರು ದುರಸ್ತಿಗೆ ಬಿಟ್ಟು ₹1,79 ಲಕ್ಷ ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಕಂಪನಿ ವಾಹನದ ಮಾಲೀಕತ್ವವನ್ನು ವರ್ಗಾಯಿಸಿದ್ದು, ದೂರುದಾರರ ಆರ್.ಸಿ ಯನ್ನು 14 ದಿನದೊಳಗೆ ವಿಮೆ ಪಾಲಿಸಿಯಲ್ಲಿ ಹೆಸರು ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ದೂರುದಾರರ ಹೆಸರಿಗೆ ವಿಮಾ ಪಾಲಿಸಿ ವರ್ಗಾಯಿಸಲು ವಿಮಾ ಕಂಪನಿಗೆ ತಿಳಿಸಿಲ್ಲ. ಆದ್ದರಿಂದ ಪರಿಹಾರ ಮೊತ್ತ ಪಾವತಿ ಸಾಧ್ಯವಿಲ್ಲ ಎಂದು ಕಂಪನಿ ಹೇಳಿದ್ದರಿಂದ ಮೊಹಮ್ಮದ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಕಂಪನಿ ಪ್ರತಿನಿಧಿ ಆಯೋಗದ ಮುಂದೆ ದೂರುದಾರರ ಆರೋಪವನ್ನು ಅಲ್ಲಗೆಳೆದು ವಿಮಾ ಪಾಲಿಸಿಯಲ್ಲಿ ಹೆಸರು ನೋಂದಣಿ ವಿಷಯವನ್ನು ಪುನರುಚ್ಛರಿಸಿದ್ದರು. ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯ ರಾಜು ಎನ್.ಮೇತ್ರಿ ಅವರು ಎರಡೂ ಕಡೆಯ ವಾದ ಆಲಿಸಿ ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲಿ ವಿಮಾ ಪಾಲಿಸಿಯು ಚಾಲ್ತಿಯಲ್ಲಿರುವ ಕಾರಣ ದೂರುದಾರರ ಕಾರಿನ ದುರಸ್ತಿ ಪೂರ್ಣ ಮೊತ್ತ ಪಾವತಿಸಬೇಕು ಎಂದು ಆದೇಶ ನೀಡಿದರು.
ನಷ್ಟ ಪರಿಹಾರವನ್ನು ವಾಹನ ಅಪಘಾತದ ದಿನಾಂಕದಿಂದ ಪಾವತಿಯಾಗುವ ತನಕ ವಾರ್ಷಿಕ ಶೇ 6ರ ಬಡ್ಡಿ ಸಮೇತ ನೀಡಬೇಕು. ದೂರುದಾರರಿಗೆ ಉಂಟಾದ ಮಾನಸಿಕ ಯಾತನೆ ₹10 ಸಾವಿರ ಮತ್ತು ದೂರಿನ ಖರ್ಚು ₹5 ಸಾವಿರವನ್ನು 45 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.