ADVERTISEMENT

ಕೊಪ್ಪಳ | ಜಾತಿ ಪ್ರಮಾಣಪತ್ರ ಬಗ್ಗೆ ಜಾಗೃತಿ ಇರಲಿ: ಜಯಪ್ರಕಾಶ ಹೆಗ್ಡೆ

ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 5:13 IST
Last Updated 19 ನವೆಂಬರ್ 2022, 5:13 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿದರು   

ಕೊಪ್ಪಳ: ‘ಜಾತಿ ಪ್ರಮಾಣ ಪತ್ರ ವಿತರಣೆ ಸಮಯದಲ್ಲಿ ಜಾಗೃತಿ ವಹಿಸಬೇಕು. ಶಾಲಾ ದಾಖಲಾತಿ ಇಲ್ಲದಿದ್ದಾಗ ಪೂರಕ ದಾಖಲಾತಿ ನೋಡಿ ಜಾತಿ ಪ್ರಮಾಣ ಪತ್ರ ನೀಡುವಾಗಲೂ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಸಿದ ಪ್ರಕಾರ ಪ್ರವರ್ಗ 3ಬಿ ಇಂದ 2ಎ ವರ್ಗಕ್ಕೆ ಬದಲಾವಣೆ ಮಾಡಿಕೊಡುವಂತೆ ಹಾಗೂ ಒಕ್ಕಲಿಗ, ಕುಡು ಒಕ್ಕಲಿಗ ಜಾತಿಗಳನ್ನು ನಿರ್ದಿಷ್ಟ ಮೀಸಲು ವರ್ಗಕ್ಕೆ ಸೇರಿಸುವಂತೆ ಮನವಿಗಳು ಬಂದಿವೆ. ಅಲ್ಲದೆ ಕೆಲ ಜಾತಿಗಳಲ್ಲಿ ಒಳ ಪಂಗಡಗಳು, ಉಪಜಾತಿಗಳು ಇರುವುದರಿಂದ ಸಂಬಂಧಿಸಿದ ವರ್ಗದವರಿಗೆ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಲ್ಲಿಯೂ ಗೊಂದಲಗಳಿವೆ’ ಎಂದರು.

‘ನ್ಯಾಯಾಲಯದ ತೀರ್ಪಿನಂತೆ ತಂದೆಯ ಜಾತಿ ಮಕ್ಕಳಿಗೆ ಬರುತ್ತದೆ. ಆದ್ದರಿಂದ ತಹಶೀಲ್ದಾರರು ತಂದೆಯ ಜಾತಿ ಪ್ರಮಾಣ ಪತ್ರವನ್ನು ಪಡೆದು ಅದರ ಆಧಾರದಲ್ಲಿ ಮಕ್ಕಳಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು. ಕೆಲ ಸಂದರ್ಭದಲ್ಲಿ ಸಮುದಾಯದಲ್ಲಿ ರಚಿಸಿಕೊಂಡ ಸಂಘಗಳು ಜಾತಿ ದೃಢೀಕರಣಕ್ಕೆ ಶಿಫಾರಸು ಪತ್ರಗಳನ್ನು ನೀಡುತ್ತವೆ. ಆದರೆ ಅಂಥ ಪತ್ರಗಳು ಮಾನ್ಯವಲ್ಲ. ಅಂತಹ ಸಂದರ್ಭಗಳಲ್ಲಿ ತಹಶೀಲ್ದಾರರು ಖುದ್ದಾಗಿ ಅರ್ಜಿದಾರರ ಸ್ಥಳಕ್ಕೆ ತೆರಳಿ ಮಹಜರು ನಡೆಸಿ, ಸೂಕ್ತ ಆಧಾರಗಳು ಲಭ್ಯವಾದಲ್ಲಿ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಸತಿ ನಿಲಯಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ, ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಸತಿ ನಿಲಯದ ಮೂಲ ಸೌಕರ್ಯಗಳಿಗೆ ಜಿಲ್ಲಾ ಪಂಚಾಯಿತಿ ಅನುದಾನ ಪಡೆದುಕೊಳ್ಳಬಹುದು’ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಿ.ಎಂ.ದೊಡ್ಡಮನಿ, ಆಯೋಗದ ಸದಸ್ಯರಾದ ಕಲ್ಯಾಣ ಕುಮಾರ ಎಚ್.ಎಸ್., ಪಿ.ಎಸ್.ರಾಜಶೇಖರ್, ಕೆ.ಟಿ.ಸುವರ್ಣ, ಶಾರದಾ ನಾಯ್ಕ್, ಅರುಣ ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ ಸೇರಿದಂತೆ ಅನೇಕರು ಇದ್ದರು.

ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ

ಕೊಪ್ಪಳ: ಕೆ.ಜಯಪ್ರಕಾಶ ಹೆಗ್ಡೆ ಹಾಗೂ ಸದಸ್ಯರ ತಂಡ ಜಿಲ್ಲೆಯಲ್ಲಿನ ಗೌಳಿ, ನೊಳಂಬ, ವೀರಶೈವ ಲಿಂಗಾಯತ ಪಂಚಮಸಾಲಿ, ಆದಿಬಣಜಿಗ, ಕುಡುವಕ್ಕಲಿಗ ಹಾಗೂ ಇತರೆ ಓಬಿಸಿ ಸಮುದಾಯದವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನ ನಡೆಸಿತು.

ಕುಷ್ಟಗಿ ತಾಲ್ಲೂಕಿನ ಜುಮನಾಳ ಗ್ರಾಮಕ್ಕೆ ಭೇಟಿ ನೀಡಿ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿ ಓಬಿಸಿ ಸಮುದಾಯವರಿಂದ ಅರ್ಜಿ ಸ್ವೀಕರಿಸಿದರು. ನವಲಹಳ್ಳಿಯಲ್ಲಿ ಕೂಡ ಸಭೆ ನಡೆಯಿತು. ಗಾಣಿಗ, ಉಪ್ಪಾರ, ಗೊಲ್ಲ ಸೇರಿದಂತೆ ಇನ್ನಿತರ ಸಮುದಾಯದ ಜನ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.