ADVERTISEMENT

ಚನ್ನಬಸವ ತಾತನ ಜಾತ್ರೆ ಸಂಭ್ರಮ

ಗಂಗಾವತಿ: ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 14:19 IST
Last Updated 15 ಜನವರಿ 2022, 14:19 IST
ಗಂಗಾವತಿಯಲ್ಲಿ ಜಾತ್ರೆಗೆ ಆಗಮಿಸಿದ್ದ ಜನರನ್ನು ಚದುರಿಸುವ ಸಲುವಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ವೆಂಕಟಸ್ವಾಮಿ ಅವರು ಲಘು ಲಾಠಿ ಪ್ರಹಾರ ನಡೆಸಿದರು
ಗಂಗಾವತಿಯಲ್ಲಿ ಜಾತ್ರೆಗೆ ಆಗಮಿಸಿದ್ದ ಜನರನ್ನು ಚದುರಿಸುವ ಸಲುವಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ವೆಂಕಟಸ್ವಾಮಿ ಅವರು ಲಘು ಲಾಠಿ ಪ್ರಹಾರ ನಡೆಸಿದರು   

ಗಂಗಾವತಿ: ವಾರಾಂತ್ಯ ಕರ್ಫ್ಯೂ ಮಧ್ಯೆಯೂ ಪಟ್ಟಣದಲ್ಲಿ ಚನ್ನಬಸವ ತಾತನ ಜಾತ್ರೆ ನಡೆಯಿತು.

ಜಾತ್ರೆ ಮತ್ತು ರಥೋತ್ಸವ ನಿಮಿತ್ತ ಚನ್ನಬಸವ ತಾತನ ದೇವಸ್ಥಾನವನ್ನು ಬಾಳೆ ದಿಂಡು, ತೋರಣ, ತಾಳೆ ದಿಂಡು, ತೆಂಗಿನಗರಿ, ಪೆಂಡಲ್, ಬೆಳಿಕಿನ ಬಲ್ಬುಗಳನ್ನು ಹಾಕಿ ಸಿಂಗರಿಸಿದ ದೃಶ್ಯಗಳು ಕಂಡು ಬಂದವು.

ಚನ್ನಬಸವ ತಾತನ ಮೂರ್ತಿಗೆ ಮತ್ತು ಗದ್ದುಗೆಗೆ (ಸಮಾಧಿ) ವಿವಿಧ ರೀತಿಯ ಚೆಂಡು ಹೂವು ಮತ್ತು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 7ಕ್ಕೆ ಸಾಂಕೇತಿಕವಾಗಿ ಎರಡೆಜ್ಜೆ ರಥ ಎಳೆಯಲಾಯಿತು.

ADVERTISEMENT

ಬೆಳಿಗ್ಗೆ 7ರಿಂದ 10ವರೆಗೆ ದೇವಸ್ಥಾನದಲ್ಲಿ ಚನ್ನಬಸವ ತಾತ ಮೂರ್ತಿ ಮತ್ತು ಗದ್ದುಗೆಯ ದರ್ಶನಕ್ಕೆ ಅವಕಾಶ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಅವರಿಗೆ ದೇವಸ್ಥಾನದ ವತಿಯಿಂದ ಪ್ರಸಾದವಾಗಿ ಲಡ್ಡು ವಿತರಣೆ ಮಾಡಲಾಯಿತು.

ಬೆಳಿಗ್ಗೆ ಚನ್ನಬಸವ ತಾತನ ಮೂರ್ತಿಗೆ ರುದ್ರಾಭಿಷೇಕ, ಅಭಿಷೇಕ ಸೇರಿದಂತೆ ವಿವಿಧ ರೀತಿಯ ವಿಶೇಷ ಪೂಜೆಗಳು ನಡೆದವು. ಕಳೆದ ದಿನ ಶುಕ್ರವಾರ ಸಂಜೆ ಚನ್ನಬಸವ ತಾತನ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಈ ವೇಳೆಯಲ್ಲಿ ಚನ್ನಬಸವ ತಾತನ ಪುರಾಣ ಮಂಗಳ ಕಾರ್ಯಕ್ರಮ ನೆರವೇರಿತು.

ಜಿಲ್ಲಾಡಳಿತದ ಆದೇಶ ಉಲ್ಲಂಘನೆ: ಕೋವಿಡ್ ಕಾರಣ ಜಾತ್ರೆ ರದ್ದುಪಡಿಸಿ, ಸಾಂಕೇತಿಕ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೆ ಜಾತ್ರೆಯಲ್ಲಿ ಸಾವಿರಾರು ಜನರು ಸೇರುವ ಮೂಲಕ ಆದೇಶ ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಮತ್ತು ನಗರದ ವಿವಿಧ ವಾರ್ಡ್‌ಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು. ಬಹಳಷ್ಟು ಜನರು ಮಾಸ್ಕ್ ಕೂಡ ಧರಿಸಿರಲಿಲ್ಲ. ಜಾತ್ರೆ ಕಾರಣ ನಗರದಲ್ಲಿ ವಾರಾಂತ್ಯದ ಕರ್ಫ್ಯೂ ಅನ್ವಯವಾಗಲಿಲ್ಲ.‌ ಇಲ್ಲಿನ ಕೃಷ್ಣದೇವರಾಯ, ಗಾಂಧಿ, ಮಹಾವೀರ, ಸಿಬಿಎಸ್, ಜುಲೈನಗರ, ಆದಿ ಜಾಂಭವ ವೃತ್ತದಲ್ಲಿ ಸಂಜೆಯವರೆಗೆ ಜನ ಸಂಚಾರ ಎಂದಿನಂತೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.