ಕೊಪ್ಪಳ: ’ಲೋಕಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾಗ ಜಿಲ್ಲೆಯ ಜನ ತೋರಿದ ಅಪಾರ ಪ್ರೀತಿ ಸದಾ ನೆನಪಿನಲ್ಲಿ ಉಳಿಯುವಂತಿದ್ದು, ಈಗಾಗಲೇ ಜಿಲ್ಲೆಗೆ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಿ ಜಿಲ್ಲೆಯ ಜನರ ಮತ್ತಷ್ಟು ಋಣ ತೀರಿಸುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ₹2,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮೈಸೂರಿಗೆ ಹೋದಾಗ ಆಗುವಷ್ಟು ಖುಷಿ ಕೊಪ್ಪಳಕ್ಕೆ ಬಂದಾಗಲೂ ಆಗುತ್ತದೆ ಎಂದರು. 1991ರ ಲೋಕಸಭಾ ಚುನಾವಣೆಗೆ ತಮಗೆ ನೆರವಾದವರನ್ನು ಸ್ಮರಿಸಿ ಆಗ ನಾನು ಚುನಾವಣೆಯಲ್ಲಿ ಗೆದ್ದಿದ್ದರೂ ಮತ ಎಣಿಕೆಯಲ್ಲಿ ಸೋತಿದ್ದೆ ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕಿಮ್ಸ್ ಬೋಧಕ ಆಸ್ಪತ್ರೆ, ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಕನಕದಾಸ ಮೂರ್ತಿಯ ಅನಾವರಣ ಮತ್ತು ಭಾಗ್ಯನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.
‘ರಾಜ್ಯ ಸರ್ಕಾರದ ಬಳಿ ಹಣವಿಲ್ಲದಿದ್ದರೆ ಒಂದೇ ದಿನ ₹2000 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯವಾದರೂ ಹೇಗೆ ಸಾಧ್ಯವಾಗುತ್ತಿತ್ತು’ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು ‘ಇದುವರೆಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹13 ಸಾವಿರ ಕೋಟಿ ಅನುದಾನ ನೀಡಲಾಗಿದೆ. ನಮ್ಮ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ’ ಎಂದು ಹೇಳಿದರು.
‘ಗ್ಯಾರಂಟಿ ಯೋಜನೆಗಳಿಂದ ಕೊಪ್ಪಳ ಜಿಲ್ಲೆಯೊಂದರಲ್ಲೇ 9 ಕೋಟಿ 22 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು ₹330 ಕೋಟಿ ಖರ್ಚಾಗಿದೆ. ಅನ್ನಭಾಗ್ಯಕ್ಕೆ 1.96 ಕೋಟಿ ಜನರಿಗೆ ₹320 ಕೋಟಿ ಮೊತ್ತದ 39.097 ಮೆಟ್ರಿಕ್ ಟನ್ ದವಸ ಧಾನ್ಯಗಳನ್ನು ವಿತರಿಸಲಾಗಿದೆ. ಸರ್ಕಾರದ ಬೊಕ್ಕಸ ಖಾಲಿಯಾಗಿದ್ದರೆ ಇಷ್ಟೊಂದು ಪ್ರಮಾಣದ ಹಣವನ್ನು ಜನರಿಗೆ ಕೊಡಲು ಸಾಧ್ಯವಿತ್ತೇ’ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಿಗೆ ಮುಖ್ಯಮಂತ್ರಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ತ ಮತ್ತು ಸಾಮಗ್ರಿ ಒದಗಿಸಿದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಬಾದರ್ಲಿ ಹಂಪನಗೌಡ, ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ವಿವಿಧ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವ ವಿಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ ಮೋಹನರಾಜ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಝಹಿರಾ ನಸೀಮ್, ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್, ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಜಿಎಸ್‌ಟಿ ಜಾರಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಎಂಟು ವರ್ಷಗಳ ಕಾಲ ದೇಶದ ಜನರ ಸುಲಿಗೆ ಮಾಡಿದರು. ಈಗಲೂ ಕೇಂದ್ರದಿಂದ ₹15 ಸಾವಿರ ಕೋಟಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿ
ಮೂರು ಬೇಡಿಕೆ ಇಟ್ಟ ಶಾಸಕ ಹಿಟ್ನಾಳ
ಕೊಪ್ಪಳ: ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯ ಅವರನ್ನು ಹೊಗಳಿ ‘ಜಿಲ್ಲೆಯ ಜನ ಈ ಕಾರ್ಯಕ್ರಮವನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕು. ವೈದ್ಯಕೀಯ ಕಾಲೇಜು ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಎರಡೂ ಮಾಡಿದ್ದು ಸಿದ್ದರಾಮಯ್ಯನವರು’ ಎಂದರು. ‘ಜಿಲ್ಲೆ ಅಭಿವೃದ್ಧಿಯಾಗಲು ಸಿದ್ದರಾಮಯ್ಯನವರ ಕೊಡುಗೆ ಅಪಾರವಾಗಿದೆ. ನೀರಾವರಿ ಯೋಜನೆಗಳಿಗೂ ಅನುದಾನ ಒದಗಿಸಿದ್ದು ಕೊಪ್ಪಳದಲ್ಲಿ ವಿಮಾನ ನಿಲ್ದಾಣವಾಗಬೇಕು ಕುರಿಗಳ ಸಂತೆಗೆ ಜಾಗ ಖರೀದಿಗೆ ಹಣ ನೀಡಬೇಕು ಹಾಗೂ ಕೊಪ್ಪಳ ವಿಶ್ವವಿದ್ಯಾಲಯವನ್ನು ಜಿಲ್ಲಾಕೇಂದ್ರದಲ್ಲಿ ಆರಂಭಿಸಲು ಜಾಗ ನೀಡಬೇಕು’ ಎಂದು ಮನವಿ ಮಾಡಿದರು.
‘ಗ್ಯಾರಂಟಿ ಟೀಕಿಸುವವರು ಕೊಪ್ಪಳಕ್ಕೆ ಬಂದು ನೋಡಲಿ’
ಕೊಪ್ಪಳ: ‘ರಾಜ್ಯದಲ್ಲಿ ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದರೆ ಮುಖ್ಯಮಂತ್ರಿ ಅವರು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಯೇ ಇಲ್ಲ ಎಂದು ಟೀಕೆ ಮಾಡುತ್ತಿರುವವರು ಕೊಪ್ಪಳ ಜಿಲ್ಲೆಗೆ ಬಂದು ನೋಡಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ‘ಹಿಂದುಳಿದವರ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಸಮೀಕ್ಷೆ ಕೈಗೊಳ್ಳಲಾಗಿದೆ. ಆದರೆ ಇದಕ್ಕೆ ಕೆಲ ಶ್ರೀಮಂತರು ಮತ್ತು ಬಲಾಢ್ಯರ ವಿರೋಧ ಇದೆ. ಬಡವರಿಂದ ಈ ಸಮೀಕ್ಷೆ ಕಾರ್ಯಕ್ಕೆ ಯಾವುದೇ ವಿರೋಧ ಇಲ್ಲ’ ಎಂದರು. ‘ರಾಜ್ಯದಲ್ಲಿ ತುಳಿತಕ್ಕೆ ಒಳಗಾದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕೆಂಬುದು ಸಿದ್ದರಾಮಯ್ಯ ಅವರ ಆಶಯ. ನಾವು ಯಾವುದೇ ಷಡ್ಯಂತ್ರಕ್ಕೆ ಬಗ್ಗುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಶೇ. 75 ರಷ್ಟು ಸಮೀಕ್ಷ ಕಾರ್ಯ ಪೂರ್ಣಗೊಂಡಿದೆ. ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ಕಾಮಗಾರಿ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು ಕೆಕೆಆರ್‌ಡಿಬಿ ವತಿಯಿಂದ ₹8.5 ಕೋಟಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ₹50 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.