ADVERTISEMENT

ತಪ್ಪು ಮರುಕಳಿಸಿದರೆ ಕಲ್ಲು ಹೊಡೆಯುತ್ತೇವೆ: ಕಾಂಗ್ರೆಸ್‌ ನಾಯಕರ ಆಕ್ರೋಶ

ಸಿದ್ದರಾಮಯ್ಯ ಕೊಡಗು ಭೇಟಿ ವೇಳೆ ನಡೆದ ಅಹಿತಕರ ಘಟನೆಗೆ ಬಿಜೆಪಿ ವಿರುದ್ಧ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 9:20 IST
Last Updated 19 ಆಗಸ್ಟ್ 2022, 9:20 IST
ಕೊಪ್ಪಳದಲ್ಲಿ ಶುಕ್ರವಾರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ (ಎಡದಿಂದ ಮೂರನೆಯವರು) ಮಾತನಾಡಿದರು.
ಕೊಪ್ಪಳದಲ್ಲಿ ಶುಕ್ರವಾರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ (ಎಡದಿಂದ ಮೂರನೆಯವರು) ಮಾತನಾಡಿದರು.   

ಕೊಪ್ಪಳ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ವೇಳೆ ನಡೆದ ಅಹಿತಕರ ಘಟನೆ ಮರುಕಳಿಸಿದರೆ ಬಿಜೆಪಿ ಶಾಸಕರು ಹಾಗೂ ಸಚಿವರು ಬಂದಾಗಲೆಲ್ಲ ಕಲ್ಲು ಎಸೆಯಬೇಕಾಗುತ್ತದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ‘ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮಕ್ಕೆ ವ್ಯಕ್ತವಾದ ಜನಬೆಂಬಲ ಕಂಡು ಬಿಜೆಪಿ ದಿಕ್ಕೆಟ್ಟು ಹೋಗಿದೆ. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಭ್ರಮನಿರಸನಗೊಂಡು ಬಿಜೆಪಿ ಇಂಥ ಕೆಲಸಗಳನ್ನು ಮಾಡುತ್ತಿದೆ’ ಎಂದು ಟೀಕಿಸಿದರು.

‘ಬಿಜೆಪಿ ಕಾರ್ಯಕರ್ತರು ಕದ್ದು ತಂದು ಮೊಟ್ಟೆಗಳನ್ನು ಎಸೆದಿದ್ದಾರೆ. ಬಿಜೆಪಿ ಕೆಟ್ಟ ಆಡಳಿತ ಮತ್ತು ಪೊಲೀಸರ ವೈಫಲ್ಯವೇ ಈ ಘಟನೆಯ ನೇರ ಕಾರಣ. ಗೂಂಡಾವರ್ತನೆ ತೋರಿದ ಬಿಜೆಪಿಯ ಎಲ್ಲಾ ಕಾರ್ಯಕರ್ತರನ್ನು ಬಂಧಿಸಬೇಕು. ಇದೇ ರೀತಿಯ ಘಟನೆ ನಡೆದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮನೆಗೆ ಮೊಟ್ಟೆಗಳನ್ನು ಕಳುಹಿಸಬೇಕಾಗುತ್ತದೆ‘ ಎಂದರು.

ADVERTISEMENT

‘ಬಳ್ಳಾರಿಗೆ ಬರಲಿ ನೋಡೊಣ ಎಂದು ಹಿಂದೆ ಸಿದ್ದರಾಮಯ್ಯ ಅವರಿಗೆ ಜನಾರ್ದನ ರೆಡ್ಡಿ ಸವಾಲು ಹಾಕಿದ್ದರು. ಕೊನೆಗೆ ರೆಡ್ಡಿಯೇ ಊರು ಬಿಟ್ಟ ಹೋಗಬೇಕಾಯಿತು. ರೆಡ್ಡಿಗೆ ಆದ ಸ್ಥಿತಿ ಅಪ್ಪಚ್ಚು ರಂಜನ್‌ಗೂ ಆಗುತ್ತದೆ. ಆತ ರಾಜಕಾರಣದ ಬಚ್ಛಾ’ ಎಂದರು.

ಇದಕ್ಕೂ ಮೊದಲು ಕಾಂಗ್ರೆಸ್‌ ವತಿಯಿಂದ ನಗರದ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.