ADVERTISEMENT

‘ಹಣ ವಾಪಸ್ ಪಡೆದಿದ್ದು ಸರಿಯಲ್ಲ’

ಕೆಕೆಆರ್‌ಡಿಬಿ ಅನುದಾನ ಇಲಾಖೆಗೆ ವಾಪಸ್‌ ನೀಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 12:54 IST
Last Updated 3 ನವೆಂಬರ್ 2019, 12:54 IST

ಕೊಪ್ಪಳ: ಕೆಕೆಆರ್‌ಡಿಬಿಎಲ್‌ ಅನುದಾನವನ್ನು ಲೋಕೋಪಯೋಗಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಿಗೆ ನೀಡಿದ್ದನ್ನು ಮರಳಿ ಪಡೆದಿರುವುದು ಖಂಡನೀಯ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರಡ್ಡಿ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019–20ನೇ ಸಾಲಿನ ಕಲ್ಯಾಣ ಕರ್ನಾಟಕ ಪ‍್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಈ ಮೊದಲು ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್‌ ಎಂಜಿನಿಯರಿಂಗ್‌ ವಿಭಾಗಗಳಿಗೆ ವಹಿಸಿಕೊಟ್ಟಿದ್ದು, ಅನುದಾನದಲ್ಲಿ ಬರುವ ಕಾಮಗಾರಿಗಳನ್ನು ಟೆಂಡರ್‌ ನೋಟಿಫಿಕೇಶನ್ ಹೊರಡಿಸಿ, ಟೆಂಡರ್‌ ಕರೆಯಲಾಗಿತ್ತು. ತಾವು ಅನುದಾನವನ್ನು ಹಿಂಪಡೆದು ಮರಳಿ ನಿರ್ಮಿತಿ ಕೇಂದ್ರ ಮತ್ತು ‌ಲ್ಯಾಂಡ್‌ ಆರ್ಮಿ ಏಜೆನ್ಸಿಗಳಿಗೆ ವಹಿಸಿಕೊಡು ತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿರುವ ಸಾವಿರಾರು ಗುತ್ತಿಗೆದಾರರಿಗೆ ಅನ್ಯಾಯ ವಾಗುತ್ತಿದೆ.

ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕೊಟ್ಟಂತಹ ಮೀಸಲಾತಿ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳಿಗೆ ಕಾಮಗಾರಿ ಮೀಸಲಾತಿ ಕೊಟ್ಟ ಕಾನೂನಿನಲ್ಲಿ ₹ 50 ಲಕ್ಷ ಒಳಗಿನ ಕಾಮಗಾರಿಗಳನ್ನು ಕಡ್ಡಾಯವಾಗಿ ಮೀಸಲಾತಿ ಅಡಿಯಲ್ಲಿ ಟೆಂಡರ್‌ ಮೂಲಕ ಕಾಮಗಾರಿ ನಿರ್ವಹಿಸಲು ಸರ್ಕಾರ ಆದೇಶವಿದೆ. ಈಗ ವಾಪಸ್‌ ತೆಗೆದುಕೊಂಡ ಕಾಮಗಾರಿಗಳೆಲ್ಲವೂ ₹ 50 ಲಕ್ಷಗಳಿಗಿಂತ ಕಡಿಮೆ ಇರುವುದರಿಂದ ಸರ್ಕಾರ ಮಾಡಿದ ಕಾನೂನಿನ ವಿರುದ್ಧವೇ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ವೃತ್ತಿಯನ್ನು ನಂಬಿ ಸಾವಿರಾರು ಗುತ್ತಿಗೆದಾರರು ಜೀವನ ಮಾಡುತ್ತಿದ್ದು, ಈ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ಕಾಮಗಾರಿ ನೀಡಲು ಕಾಮಗಾರಿ ನಿರ್ವಹಿಸಲು ಸ್ವಂತ ಯಂತ್ರೋಪಕರಣಗಳು ಇಲ್ಲ. ಈ ಏಜೆನ್ಸಿಗಳು ಕೂಡಾ ಗುತ್ತಿಗೆದಾರರು ಎಂದು ತಿಳಿದು ಟೆಂಡರ್‌ನಲ್ಲಿ ಅವರಿಗೂ ಭಾಗವಹಿಸಲು ಅಧಿಕಾರ ಇರುತ್ತದೆ. ಕನಿಷ್ಠ 2011ರಿಂದ ಈ ಏಜೆನ್ಸಿಗಳಿಗೆ ನೀಡಿದ ಕಾಮಗಾರಿಗಳ‌ನ್ನು ಈವರೆಗೂ ಪೂರ್ಣಗೊಳಿಸಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ತಾವು ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್‌ ಆರ್ಮಿ ಏಜೆನ್ಸಿಗಳಿಗೆ ನೀಡಿದ ಕೆಕೆಆರ್‌ಡಿಬಿ ಅನುದಾನವನ್ನು ಲೋಕೋಪಯೋಗಿ ಮತ್ತು ಪಂಚಾಯತ್‌ ರಾಜ್ ಎಂಜಿನಿಯರಿಂಗ್‌ ವಿಭಾಗಕ್ಕೆ ನೀಡಿ, ಸಾವಿರಾರು ಗುತ್ತಿಗೆದಾರರು ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಸಂಘದ ಗೌರವಾಧ್ಯಕ್ಷ ಎಸ್‌.ಆರ್‌.ನವಲಿಹಿರೇಮಠ, ಉಪಾಧ್ಯಕ್ಷ ಎಸ್‌.ಎಸ್.ಹುಸೇನಿ, ಕಾರ್ಯದರ್ಶಿ ದೇವಪ್ಪ ಅರಕೇರಿ, ಖಜಾಂಚಿ ಎಲ್‌.ಎಂ.ಮಲ್ಲಯ್ಯ, ಎಸ್‌ಸಿ–ಎಸ್‌ಟಿ ಗುತ್ತಿಗೆದಾರರ ಸಂಘದ ಹನುಮೇಶ ಕಡೆಮನಿ, ಶಿವಮೂರ್ತಿ ಗುತ್ತೂರು, ಶ್ರೀಧರ ಬನ್ನಿಕೊಪ್ಪ, ಸುರೇಶ ಬಳಗಾನೂರು, ರಾಮಣ್ಣ ಚೌಡಕಿ, ಯಲ್ಲಪ್ಪ ಮುದ್ಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.