
ರಾಘವೇಂದ್ರ ಹಿಟ್ನಾಳ
ಕೊಪ್ಪಳ: ಜಿಲ್ಲೆಯ ಕ್ರಷರ್ ಸಾಮಗ್ರಿಗಳ ಮಾರಾಟದ ವಿಚಾರವಾಗಿ ಗುತ್ತಿಗೆದಾರರು ಪ್ರತಿಭಟನೆ ನಡೆಸಲು ಮುಂದಾಗಿರುವ ವಿಚಾರ ಗಮನಕ್ಕಿದ್ದು, ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ‘ಗುತ್ತಿಗೆದಾರರ ಮನವೊಲಿಸುವುದು ಅನಿವಾರ್ಯ ವಾಗಿದ್ದು, ಗುತ್ತಿಗೆದಾರರು, ಕ್ರಷರ್ ಮಾಲೀಕರು, ಸರ್ಕಾರ ಹಾಗೂ ಕಾಮಗಾರಿ ಇದೆಲ್ಲವೂ ಒಂದಕ್ಕೊಂದು ಕೊಂಡಿ ಬೆಸೆದುಕೊಂಡಿದ್ದು, ವ್ಯವಸ್ಥೆಯ ಭಾಗವಾಗಿದೆ. ದೊಡ್ಡ ಸಮಸ್ಯೆ ಏನಿಲ್ಲ. ಪ್ರತಿಭಟನೆ ಮಾಡದಂತೆ ಮನವೊಲಿಸಲಾಗುವುದು’ ಎಂದು ತಿಳಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಒಡೆತನದ ಪ್ರೇರಣಾ ಸಂಸ್ಥೆಯ ಮೂಲಕವೇ ಕ್ರಷರ್ ಸಾಮಗ್ರಿಗಳನ್ನು ಖರೀದಿ ಮಾಡಬೇಕು ಎನ್ನುವ ನಿಯಮ ಹೇರಲಾಗಿದೆ ಎಂದು ಗುತ್ತಿಗೆದಾರರ ಸಂಘದವರು ಆರೋಪಿಸಿದ್ದರು. ಈ ಕುರಿತು ಕೆಲವು ದಿನಗಳ ಹಿಂದೆ ಶಾಸಕ ಹಿಟ್ನಾಳ ಗುತ್ತಿಗೆದಾರರ ಜೊತೆ ಸಭೆ ನಡೆಸಿ ಸಮಸ್ಯೆ ಪರಿಹರಿಸಿದ್ದರು. ಈಗ ಕ್ರಷರ್ ಮಾಲೀಕರು ಶಾಸಕರ ಮಾತಿಗೆ ಒಪ್ಪದ ಕಾರಣ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘ ನ. 12ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
‘ಪ್ರೇರಣಾ ಸಂಸ್ಥೆಯ ಮೂಲಕವೇ ಕ್ರಷರ್ ಸಾಮಗ್ರಿಗಳನ್ನು ಖರೀದಿಸಬೇಕು ಎನ್ನುವ ಒತ್ತಡ ಯಾರಿಗೂ ಹೇರಿಲ್ಲ. ಜಲ್ಲಿಕಲ್ಲು, ಸಿಮೆಂಟ್ ಗುತ್ತಿಗೆದಾರರಿಗೆ ನೇರವಾಗಿ ಮಾರಾಟ ಮಾಡುವುದು ಕ್ರಷರ್ ಮಾಲೀಕರಿಗೆ ಬಿಟ್ಟ ವಿಚಾರವಾಗಿದ್ದು, ಕೆಲ ಗುತ್ತಿಗೆದಾದರರು ಒಂದೂವರೆ ವರ್ಷದಿಂದ ಹಣ ಕೊಟ್ಟಿಲ್ಲ. ಹಣ ಬಾಕಿ ಉಳಿಸಿಕೊಂಡಿದ್ದರಿಂದ ಸಮಸ್ಯೆಯಾಗಿದೆ ಎಂದು ಕ್ರಷರ್ ಮಾಲೀಕರೇ ಹೇಳಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.