ADVERTISEMENT

ಕೋವಿಡ್‌ ಕಾರ್ಯಪಡೆ ದಾಳಿ

ನೋಂದಣಿ ಮಾಡಿಕೊಳ್ಳಲು ಸೂಚನೆ: ತೀವ್ರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 6:04 IST
Last Updated 12 ಮೇ 2021, 6:04 IST
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಕೋವಿಡ್‌- ಕಾರ್ಯಪಡೆ ಅಧಿಕಾರಿಗಳು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದರು
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಕೋವಿಡ್‌- ಕಾರ್ಯಪಡೆ ಅಧಿಕಾರಿಗಳು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದರು   

ಕೊಪ್ಪಳ: ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಕಾರಣ ಜನರು ಭಯಗೊಂಡಿದ್ದು, ಅದನ್ನೇ ಬಂಡವಾಳ ಮಾಡಿಕೊಂಡ ಅನೇಕರು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಮತ್ತು ಅನವಶ್ಯಕವಾಗಿ ಔಷಧಗಳನ್ನು ನೀಡುತ್ತಿದ್ದಾರೆ ಎಂದು ದೂರುಗಳು ಬಂದ ಕಾರಣ ಕೋವಿಡ್‌ ಕಾರ್ಯಪಡೆ ಕಳೆದ ಮೂರು ದಿನದಿಂದ ವಿವಿಧೆಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿತು.

ತಾಲ್ಲೂಕಿನ ಅಳವಂಡಿ, ಕಿನ್ನಾಳ, ಇರಕಲ್ಲಗಡಾದಲ್ಲಿ ತಹಶೀಲ್ದಾರ್ ಅಮರೇಶ ಬಿರಾದಾರ ನೇತೃತ್ವದಲ್ಲಿ ಕಾರ್ಯಪಡೆ ಮುಖ್ಯಸ್ಥ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ವಿವಿಧೆಡೆ ಪರಿಶೀಲನೆ ನಡೆಸಿದರು.

ಕಿನ್ನಾಳ ಗ್ರಾಮದಲ್ಲಿ ಒಟ್ಟು 3 ಖಾಸಗಿ ವೈದ್ಯಕೀಯ ಕ್ಲಿನಿಕ್‌ಗಳು ಇದ್ದು ಇದರಲ್ಲಿ ಒಂದು ಮಾತ್ರ ಕೆ.ಪಿ.ಎಂ.ಇ ಕಾಯ್ದೆಯಡಿಯಲ್ಲಿ ನೋಂದಣಿ ಆಗಿದ್ದು ಉಳಿದಂತೆ ಮಂಜುನಾಥ ಕ್ಲಿನಿಕ್‌,ಅಲ್ ಶಿಪಾ ಕ್ಲಿನಿಕ್ ಸರಿಯಾದ ದಾಖಲೆಗಳು ಇಲ್ಲದ ಕಾರಣ ಬಂದ್‌ ಮಾಡಿಸಲಾಯಿತು.

ADVERTISEMENT

ಇರಕಲ್ಲಗಡ ಗ್ರಾಮದಲ್ಲಿ4 ಕ್ಲಿನಿಕ್‌ಗಳು ಇದ್ದು ಈ ಕ್ಲಿನಿಕ್‌ಗಳು ನೋಂದಣಿಯಾಗದ ಕಾರಣ ಒಂದು ವಾರದ ಒಳಗೆ ಕೆ.ಪಿ.ಎಂ.ಇ ತಂತ್ರಾಂಶದ ಮೂಲಕ ನೊಂದಣಿ ಮಾಡಿಕೊಳ್ಳಲು ಸೂಚಿಸಿದೆ. ತಪ್ಪಿದಲ್ಲಿಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ತಂಡವು ನಕಲಿ ವೈದ್ಯರು ಹಾಗೂಕರ್ನಾಟಕ ವೈದ್ಯಕೀಯ ಪ್ರತಿಬಂಧಕ ಕಾಯ್ದೆ ಅಡಿ ಪರವಾನಿಗೆ ಇಲ್ಲದೆ ಆಸ್ಪತ್ರೆ ನಡೆಸುವುದು ಅಪರಾಧವಾಗಿದೆ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದುಕಾರ್ಯಪಡೆಯ ಸದಸ್ಯರಾದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.