ADVERTISEMENT

ಕುಷ್ಟಗಿ ಸೀಲ್‌ಡೌನ್‌ ಸಾಧ್ಯವಿಲ್ಲ; ಸ್ಪಷ್ಟನೆ

ಒಪ್ಪದ ಜಿಲ್ಲಾಧಿಕಾರಿ: ತಹಶೀಲ್ದಾರ್ ಹೇಳಿಕೆ, ಪುರಸಭೆ ನಿರ್ಣಯಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 6:08 IST
Last Updated 12 ಮೇ 2021, 6:08 IST
ಕುಷ್ಟಗಿಯಲ್ಲಿ ಮಂಗಳವಾರ ಬೈಕ್‌ಗಳು ಸಂಚರಿಸಿದವು
ಕುಷ್ಟಗಿಯಲ್ಲಿ ಮಂಗಳವಾರ ಬೈಕ್‌ಗಳು ಸಂಚರಿಸಿದವು   

ಕುಷ್ಟಗಿ: ‘ಇಡೀ ಪಟ್ಟಣವನ್ನು ಸೀಲ್‌ಡೌನ್‌ ಮಾಡಲು ಸಾಧ್ಯವಿಲ್ಲ’ ಎಂದು ತಹಶೀಲ್ದಾರ್ ಎಂ.ಸಿದ್ದೇಶ್‌ ಮಂಗಳವಾರ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ನಿಗದಿತ ಅವಧಿಯಲ್ಲಿ ಲಾಕ್‌ಡೌನ್‌ ಜಾರಿಗೆ ತಂದಿದ್ದರೂ ಪಟ್ಟಣದಲ್ಲಿ ಕೊರೊನಾ ಸೊಂಕು ಪ್ರಕರಣಗಳು ಹೆಚ್ಚುತ್ತಿವೆ. ಈ ಕಾರಣಕ್ಕೆ ಎಲ್ಲ ರೀತಿಯ ವ್ಯಾಪಾರ ವಹಿವಾಟು ನಿರ್ಬಂಧಿಸುವುದರ ಜತೆಗೆ ಪಟ್ಟಣವನ್ನು ಸಂಪೂರ್ಣವಾಗಿ ಸೀಲ್‌ ಮಾಡುವ ಪ್ರಸ್ತಾವವನ್ನು ಪುರಸಭೆ ಅಧ್ಯಕ್ಷ ಮತ್ತು ಸದಸ್ಯರು ಎರಡು ದಿನಗಳ ಹಿಂದೆ ಸಭೆ ನಡೆಸಿ ತಹಶೀಲ್ದಾರ್‌ ಅವರ ಮುಂದೆ ಇರಿಸಿದ್ದರು. ಅಲ್ಲದೆ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಅಮರೇಗೌಡ ಬಯ್ಯಾಪುರ ಅವರೂ ಕೂಡ ಸೀಲ್‌ಡೌನ್‌ ಮಾಡುವುದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಈ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಕ್ಕೆ ತಹಶೀಲ್ದಾರ್ ಎರಡು ದಿನಗಳ ಕಾಲಾವಕಾಶ ಕೇಳಿದ್ದರು.

ಈ ಬಗ್ಗೆ ಮಂಗಳವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ತಹಶೀಲ್ದಾರ್,‘ಸೀಲ್‌ಡೌ
ನ್‌ ಮಾಡುವ ಪ್ರಶ್ನೆಯೇ ಇಲ್ಲ. ಪುರಸಭೆ ಅಭಿಪ್ರಾಯವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಆದರೆ ‘ಸದ್ಯ ಸರ್ಕಾರ ಹೊರಡಿಸಿರುವ ಲಾಕ್‌ಡೌನ್‌ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಹಾಗಾಗಿ ಬೆಳಿಗ್ಗೆ 10 ಗಂಟೆಯವರೆಗೆ ತರಕಾರಿ, ಹಾಲು, ಹಣ್ಣು, ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಅಧ್ಯಕ್ಷ ಹೇಳಿದ್ದು: ಈ ಕುರಿತು ವಿವರಿಸಿದ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ,‘ಸೀಲ್‌ಡೌನ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಪುರಸಭೆ ನಿರ್ಣಯದ ಲಿಖಿತ ಪತ್ರವನ್ನು ತಹಶೀಲ್ದಾರ್‌ಗೆ ನೀಡಿದ್ದೇವೆ. ಅವರಿಂದ ಇನ್ನೂ ಮಾಹಿತಿ ಬಂದಿಲ್ಲ. ಅಲ್ಲದೆ ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾಧಿಕಾರಿ
ಯೊಂದಿಗೂ ಚರ್ಚಿಸಿದ್ದು, ಜಿಲ್ಲಾಧಿಕಾರಿ
ಯೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಸೀಲ್‌ಡೌನ್‌ಗೆ ಅವಕಾಶ ನೀಡದಿದ್ದರೆ ಕೋವಿಡ್‌ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಸಕ ಅಮರೇಗೌಡ ಬಯ್ಯಾಪರ ಮತ್ತು ಪುರಸಭೆ ಸದಸ್ಯರೊಂದಿಗೆ ಪುನಃ ಸಭೆ ನಡೆಸಿ ತೀರ್ಮಾನಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.