ಕೊಪ್ಪಳ: ‘ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಣ ನೀಡಲು ಕಮಿಷನ್ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಠದ ಅಭಿವೃದ್ಧಿ ಕಾರ್ಯಕ್ಕೆ ₹3.5 ಕೋಟಿ ಮಂಜೂರು ಮಾಡಿ ₹2.5 ಕೋಟಿ ಬಿಡುಗಡೆ ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಾಕಿ ಹಣ ನೀಡದಿದ್ದಾಗ ಮಠದ ಸ್ವಾಮೀಜಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಹಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿತು. ಈ ಆದೇಶವನ್ನೂ ನಿರ್ಲಕ್ಷಿಸಿ ಶೇ 20ರಿಂದ ಶೇ 25ರಷ್ಟು ಕಮಿಷನ್ ನೀಡುವಂತೆ ತಂಗಡಗಿ ಕೇಳಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯ ಸರ್ಕಾರವು ಮಠಕ್ಕೆ ನೀಡಬೇಕಾದ ಹಣದಲ್ಲಿಯೂ ಕಮಿಷನ್ ನೀಡಲು ಒತ್ತಾಯಿಸಿರುವುದನ್ನು ನೋಡಿದರೆ ಈಗಿನ ಸರ್ಕಾರದಲ್ಲಿ ಎಲ್ಲ ಹಂತದಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಂತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅನುದಾನ ಬಿಡುಗಡೆಗೆ ಕಪ್ಪ ವಸೂಲಿಯ ಬಗ್ಗೆ ತನಿಖೆಗೆ ಆಗ್ರಹಿಸಬೇಕು. ತಂಗಡಗಿ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಇದ್ದರು.
ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಬಸವರಾಜ ರಾಯರಡ್ಡಿ ಸತ್ಯವನ್ನೇ ಹೇಳಿದ್ದಾರೆ. ಆದರೆ ಅವರು ನಾನು ಹೇಳಿಯೇ ಇಲ್ಲ. ಮಾಧ್ಯಮಗಳು ತಿರುಚಿವೆ ಎಂದು ಬದಲಾಗುತ್ತಾರೆ.ದೊಡ್ಡನಗೌಡ ಪಾಟೀಲ ಶಾಸಕ
ಅಕ್ರಮ ಚಟುವಟಿಕೆಗಳಿಗೆ ಹಿಟ್ನಾಳ ಸಹೋದರರ ಬೆಂಬಲ: ರೆಡ್ಡಿ
ಕೊಪ್ಪಳ: ‘ಅಕ್ರಮ ಚಟುವಟಿಕೆಗಳಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಸಹೋದರರು ಕುಮ್ಮಕ್ಕು ನೀಡುತ್ತಿದ್ದಾರೆ. ಹಲವು ತಿಂಗಳ ಹಿಂದೆ ಕೊಪ್ಪಳ ಸಮೀಪದ ಬಸಾಪುರದಲ್ಲಿ ಸಿಕ್ಕ ಅಪಾರ ಪ್ರಮಾಣದ ಗಾಂಜಾ ಗಂಗಾವತಿ ಭಾಗದಲ್ಲಿ ಸಿಕ್ಕಿದೆ ಎಂದು ಪೊಲೀಸರ ಮೂಲಕ ಹೇಳಿಸಿ ಗಂಗಾವತಿಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು.
ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಕನಕಗಿರಿ ಕ್ಷೇತ್ರದಲ್ಲಿ ವ್ಯಾಪಕ ಮರಳು ಗಣಿಗಾರಿಕೆ ಆನೆಗೊಂದಿಯಲ್ಲಿ ಪೊಲೀಸ್ ಠಾಣೆ ಆರಂಭಕ್ಕೆ ಕ್ರಮ ಮುದ್ದಾಬಳ್ಳಿಯಲ್ಲಿ ಸಕ್ಕರೆ ಕಾರ್ಖಾನೆ ಮತ್ತು ಬಲ್ಡೋಟಾ ಉಕ್ಕಿನ ಕಾರ್ಖಾನೆಗೆ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಳಿ ಶೀಘ್ರದಲ್ಲಿ ನಿಯೋಗ ಹೋಗಲಾಗುವುದು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ವಿಫಲರಾಗಿದ್ದಾರೆ. ಇದೆಲ್ಲವನ್ನೂ ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಹೋರಾಟ ರೂಪಿಸಿ ಆದಷ್ಟು ಬೇಗನೆ ಗಂಗಾವತಿಯಿಂದ ಕೊಪ್ಪಳದ ತನಕ ಪಾದಯಾತ್ರೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.