ADVERTISEMENT

ಕುಷ್ಟಗಿ: ಫಲಾನುಭವಿಗಳಿಗೆ ಪರಿಹಾರ ಮರೀಚಿಕೆ

ನಾರಾಯಣರಾವ ಕುಲಕರ್ಣಿ
Published 18 ಡಿಸೆಂಬರ್ 2021, 5:30 IST
Last Updated 18 ಡಿಸೆಂಬರ್ 2021, 5:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕುಷ್ಟಗಿ: ಕೋವಿಡ್‌ ಸೋಂಕಿನಿಂದ ಮೃತಪಟ್ಟವರದುಡಿಯುವ ಸದಸ್ಯರ ಕುಟುಂಬದ ವಾರಸುದಾರರಿಗೆ ನೀಡಬೇಕಿರುವ ಸರ್ಕಾರದ ಪರಿಹಾರ ಮೊತ್ತ ಅನೇಕ ತಿಂಗಳು ಗತಿಸಿದರೂ ಅರ್ಹ ಫಲಾನುಭವಿಗಳ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದ್ದು ತಹಶೀಲ್ದಾರ್ ಕಚೇರಿಗೆ ಎಡತಾಕುವಂತಾಗಿದೆ.

ಕಂದಾಯ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ತಾಲ್ಲೂಕಿನಲ್ಲಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎನ್ನಲಾಗಿರುವ 112 ಜನರ ಅರ್ಜಿಗಳು ಸ್ವೀಕೃತಿಗೊಂಡಿದ್ದು, ಡಿ.16ರ ವರೆಗೆ 49 ಫಲಾನುಭವಿಗಳ ವಿವರಗಳು ಬಿಎಂಎಸ್‌ ತಂತ್ರಾಂಶದಲ್ಲಿ ನೋಂದಣಿಯಾಗಿವೆ. ಕೇವಲ 36 ವಾರಸುದಾರ ಫಲಾನುಭವಿಗಳಿಗೆ ತಲಾ ₹ 1 ಲಕ್ಷದಂತೆ ಪರಿಹಾರ ಮೊತ್ತದ ಚೆಕ್‌ಗಳನ್ನು ವಿತರಿಸಲಾಗಿದೆ. ಬಿಪಿಎಲ್‌ ಕುಟುಂಬಕ್ಕೆ ಸೇರಿರುವ 50 ಹಾಗೂ ಎಪಿಎಲ್‌ ಕುಟುಂಬದ 13 ಜನರಿಗೆ ಸೇರಿದ ಫಲಾನುಭವಿಗಳ ಮಾಹಿತಿ ಸರ್ಕಾರದ ಬಿಎಂಎಸ್‌ (ಡಿಎಸ್‌ಎಸ್‌ಪಿ ಕೋವಿಡ್) ತಂತ್ರಾಂಶದಲ್ಲಿ ನೋಂದಣಿಯಾಗಿಲ್ಲ. ಪರಿಹಾರ ಬರುತ್ತದೆ ಎಂದೇ ಮೃತ ವ್ಯಕ್ತಿಗಳ ವಾರಸುದಾರರು ಕಾದು ಕುಳಿತುಕೊಂಡಿದ್ದಾರೆ.

ಪರಿಹಾರ ಪಡೆಯುವುದಕ್ಕಾಗಿ ಸಂಬಂಧಿಸಿದ ಅರ್ಜಿದಾರರು ನಿಗದಿತ ಮೂರು ಹಂತದ ನಮೂನೆಗಳಲ್ಲಿ ಸ್ವಯಂ ಘೋಷಣೆ, ನಿರಾಪೇಕ್ಷಣಾ ನಮೂನೆ ಭರ್ತಿ ಮಾಡಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂಬುದನ್ನು ಪುಷ್ಟಿಕರಿಸುವ ಮತ್ತು ವೈದ್ಯರಿಂದ ದೃಢೀಕರಿಸಿದ ದಾಖಲೆಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು.

ADVERTISEMENT

ಅರ್ಜಿಗಳಿಗೆ ಸಂಬಂಧಿಸಿದಂತೆ ನೈಜತೆ ಮತ್ತು ಅರ್ಹತೆಯನ್ನು ದೃಢೀಕರಿಸುವ ಮೊದಲು ಭೌತಿಕ ಪರಿಶೀಲನೆ ನಡೆಸಬೇಕು. ಅರ್ಜಿ ಸಲ್ಲಿಸಿದ ಎರಡು ವಾರಗಳ ಒಳಗೆ ಫಲಾನುಭವಿಗಳ ವಿವರವನ್ನು ಬಿಎಂಎಸ್‌ ತಂತ್ರಾಂಶದಲ್ಲಿ ನಮೂದಿಸಬೇಕು. ತಾಲ್ಲೂಕು ಮಟ್ಟದಲ್ಲಿ ಅಪ್‌ಲೋಡ್‌ ಆಗಿರುವ ಮಾಹಿತಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿ ಅನುಮೋದಿಸಿ ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಸಲಾಗುತ್ತದೆ. ಇದರ ಅನ್ವಯ ಪರಿಶೀಲನೆ ನಡೆಸಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯವು ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಪರಿಹಾರಧನ ಜಮೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಸಂಬಂಧಿಸಿದ ಈ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೂ ತಾಲ್ಲೂಕಿನ ಶೇ 80ರಷ್ಟು ಫಲಾನುಭವಿಗಳಿಗೆ ಇದುವರೆಗೂ ಪರಿಹಾರ ಕೈಸೇರಿಲ್ಲ.

ಆಗಿದ್ದೇನು?: ‘ಕೋವಿಡ್‌ದಿಂದ ಮೃತಪಟ್ಟಿರುವ ರೋಗಿಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನೀಡಲಾಗುವ ರೋಗಿಯ ಹೆಸರು ಮತ್ತು ಸಂಖ್ಯೆ, ರೆಸಿಪಿಯಂಟ್ ಐಡಿ, ಅರ್ಜಿ ಸಂಖ್ಯೆಗಳನ್ನು ಒಳಗೊಂಡ ಮಾಹಿತಿಯನ್ನು ನಿಗದಿತ ತಂತ್ರಾಂಶದಲ್ಲಿ ತಾಲ್ಲೂಕು ಮಟ್ಟದಲ್ಲಿ ಅಪ್‌ಲೋಡ್‌ ಮಾಡಿ ಜಿಲ್ಲಾಧಿಕಾರಿ ಲಾಗಿನ್‌ಗೆ ಕಳುಹಿಸಬೇಕಾಗುತ್ತದೆ. ಹೀಗೆ ತೆರೆದುಕೊಳ್ಳುವ ವೆಬ್‌ ಪುಟದಲ್ಲಿ ಮಾಹಿತಿ ನಮೂದಿಸುವ ಸಂದರ್ಭದಲ್ಲಿ ‘ನೊ ಡೇಟಾ ಫೌಂಡ್’ ಎಂಬ ತಪ್ಪು ಸಂದೇಶ ಬರುತ್ತದೆ. ಈ ತಾಂತ್ರಿಕ ದೋಷದ ಕಾರಣಕ್ಕೆ ಅರ್ಜಿಗಳು ಬಾಕಿ ಉಳಿದಿವೆಯೇ ಹೊರತು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಿಲ್ಲ. ಅಲ್ಲದೆ ಇದು ಕೇವಲ ಈ ತಾಲ್ಲೂಕಿಗೆ ಸೀಮಿತವಾಗಿರದೆ ರಾಜ್ಯ ಮಟ್ಟದ ಸಮಸ್ಯೆಯಾಗಿದೆ. ಇದನ್ನು ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ’ ಎಂದು ತಹಶೀಲ್ದಾರ್ ಕಚೇರಿ ಸಿಬ್ಬಂದಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ತಾಂತ್ರಿಕ ಸಮಸ್ಯೆ ಕಾರಣವಲ್’ ಎಂದು ತಹಶೀಲ್ದಾರ್ ಎಂ.ಸಿದ್ದೇಶ್‌ ವಿವರಿಸಿದ್ದಾರೆ. ಸಿಬ್ಬಂದಿ ಮತ್ತು ಅಧಿಕಾರಿಗಳಲ್ಲಿ ಸಮನ್ವಯತೆ ಇಲ್ಲದಿರುವುದನ್ನು ಇದು ದೃಢಿಕರಿಸುತ್ತದೆ.

ತಾರತಮ್ಯ: ಕೋವಿಡ್ ಪರಿಹಾರ ಮೊತ್ತದ ಚೆಕ್‌ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ಫಲಾನುಭವಿಗಳದ್ದು. ಮೊದಲೇ ಅರ್ಜಿ ಸಲ್ಲಿಸಿದವರಿಗೆ ಚೆಕ್‌ ಬಂದಿಲ್ಲ. ಇತ್ತೀಚೆಗೆ ಅರ್ಜಿ ಸಲ್ಲಿದವರ ಮನೆಗೆ ಚೆಕ್‌ ನೀಡಲಾಗಿದೆ. ಈ ಬಗ್ಗೆ ಕೇಳಿದರೆ ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಯಾವ ಕಾರಣಕ್ಕೆ ಸತಾಯಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ತಹಶೀಲ್ದಾರರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.