ADVERTISEMENT

ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ

ಕೋವಿಡ್: ಪ್ರಗತಿ ಪರಿಶೀಲನಾ ಸಭೆ; ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ.ವಿ.ಮಹೇಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 4:03 IST
Last Updated 22 ಮೇ 2021, 4:03 IST
ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ.ವಿ.ಮಹೇಶ್ ಮಾತನಾಡಿದರು
ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ.ವಿ.ಮಹೇಶ್ ಮಾತನಾಡಿದರು   

ಕೊಪ್ಪಳ: ಕೋವಿಡ್ ಕೇರ್ ಸೆಂಟರ್‌ ಉಸ್ತುವಾರಿ ಸೇರಿದಂತೆ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿಗಳು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ, ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ.ವಿ.ಮಹೇಶ್ ಅಧಿಕಾರಿಗಳಿಗೆ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ನಿರ್ವಹಣೆಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಪಾಸಿಟಿವ್ ಎಂದ ಕೂಡಲೇ ಸೋಂಕಿತರಲ್ಲಿ ಭಯ, ಆತಂಕಗಳು ಮೂಡಿರುತ್ತವೆ. ಅದರೊಂದಿಗೆ ಕೋವಿಡ್ ಕೇರ್‌ಗಳಲ್ಲಿ ಸೂಕ್ತ ಚಿಕಿತ್ಸೆ ಅಥವಾ ಸ್ಪಂದನೆ ಸಿಗದಿದ್ದಲ್ಲಿ ಸೋಂಕಿತರು ಮಾನಸಿಕವಾಗಿ ಇನ್ನಷ್ಟು ಝರ್ಜರಿತರಾಗುತ್ತಾರೆ. ಆದ್ದರಿಂದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಕುಟುಂಬ ಸದಸ್ಯರಂತೆ ಅವರೊಂದಿಗೆ ಸ್ಪಂದನೆ ನೀಡಿ. ಇದರಿಂದ ಅವರು ಶೀಘ್ರ ಗುಣಮುಖರಾಗಲು ಸಹಕಾರಿಯಾಗುತ್ತದೆ ಎಂದರು.

ADVERTISEMENT

ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಬಗ್ಗೆ ನಿರಂತರ ನಿಗಾ ಇಡಬೇಕು. ಅವರ ಆರೋಗ್ಯದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಸತತ ಮಾಹಿತಿ ಪಡೆಯುತ್ತಿರಬೇಕು. ಒಂದು ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ಶೀಘ್ರವೇ ಅವರಿಗೆ ಆಮ್ಲಜನಕ ಅಥವಾ ವೆಂಟಿಲೇಟರ್ ಒದಗಿಸುವ ವ್ಯವಸ್ಥೆಯಾಗಬೇಕು. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳು ಹಾಗೂ ನಗರಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಆಶಾ ಕಾರ್ಯಕರ್ತೆಯರು ನಿರಂತರವಾಗಿ ಹೋಂ ಐಸೋಲೇಷನ್‌ನಲ್ಲಿರುವವರ ಮೇಲೆ ಸಂಪೂರ್ಣ ನಿಗಾ ವಹಿಸಬೇಕು ಎಂದರು.

ಅಂತವರು ಮನೆಯಿಂದ ಹೊರಗೆ ಓಡಾಡದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ಅಥವಾ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವ ಪ್ರಯತ್ನವಾಗಬೇಕು. ಇದರಿಂದ ಸೂಕ್ತ ಚಿಕಿತ್ಸೆಯ ಕೊರತೆಯಿಂದ ಉಂಟಾಗಬಹುದಾದ ಮರಣ ಪ್ರಮಾಣವನ್ನು ನಿಯಂತ್ರಿಸಬಹುದು. ಹೋಂ ಐಸೋಲೇಷನ್‌ನಲ್ಲಿರುವವರು ಗುಣಮುಖರಾದ ನಂತರ ಅಥವಾ ಕೋವಿಡ್ ವರದಿ ನೆಗೆಟಿವ್ ಬಂದ ನಂತರವೂ ಅವರು ನಿಯಮಾನುಸಾರ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಬೇಕು ಎಂದು ಅವರು ಹೇಳಿದರು.

ಬೇರೆ ಜಿಲ್ಲೆ, ರಾಜ್ಯಗಳಿಂದ ಗ್ರಾಮಕ್ಕೆ ಮರಳುವವರು ಹಾಗೂ ವಲಸೆ ಕಾರ್ಮಿಕರನ್ನು ಗುರುತಿಸಿ ಅವರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಬೇಕು. ಕೋವಿಡ್ ಲಕ್ಷಣವುಳ್ಳವರನ್ನು ಪರೀಕ್ಷೆಗೆ ಒಳಪಡಿಸಿ, ಸೋಂಕು ಪತ್ತೆಯಾದಲ್ಲಿ ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯವನ್ನು ಶೀಘ್ರವಾಗಿ ಮಾಡಬೇಕು. ಇದರಿಂದ ಸೋಂಕು ಹರಡುವಿಕೆಯನ್ನು ತಡೆಯಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾತನಾಡಿ, ಜಿಲ್ಲೆಯಲ್ಲಿ 106 ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಹೋಂ ಐಸೋಲೇಷನ್‌ನಲ್ಲಿ ಇರುವವರನ್ನು ಮನವೊಲಿಸಿ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಿಸುವ ಕಾರ್ಯ ನಡೆಯುತ್ತಿದೆಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನ್ ಮೂರ್ತಿ,ಹೆಚ್ಚುತ್ತಿರುವ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶರಣಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ.ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.