ADVERTISEMENT

ಕುಷ್ಟಗಿ: ನೆಲಕ್ಕೊರಗಿದ ಬೆಳೆ, ನಷ್ಟದ ಭೀತಿ

ಬೆಳೆಹಾನಿ ವರದಿ ಸಲ್ಲಿಸಲು ತಹಶೀಲ್ದಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 2:35 IST
Last Updated 22 ಸೆಪ್ಟೆಂಬರ್ 2020, 2:35 IST
ಜಹಗೀರಗುಡದೂರು ಗ್ರಾಮದ ಜಮೀನಿನಲ್ಲಿ ಸಜ್ಜೆ ಬೆಳೆ ನೆಲಕ್ಕೆ ಒರಗಿರುವುದು
ಜಹಗೀರಗುಡದೂರು ಗ್ರಾಮದ ಜಮೀನಿನಲ್ಲಿ ಸಜ್ಜೆ ಬೆಳೆ ನೆಲಕ್ಕೆ ಒರಗಿರುವುದು   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ರಭಸದ ಮಳೆ ಸುರಿದಿದ್ದು, ಹಲವು ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ.

ಸುಮಾರು ಎರಡು ತಾಸು ಸುರಿದ ಮಳೆಯಿಂದಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ರಸ್ತೆ, ಮತ್ತಿತರ ತಗ್ಗುಪ್ರದೇ‍ಶಗಳಲ್ಲಿ ನೀರು ಸಂಗ್ರವಾಗಿತ್ತು.

ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ ಅತ್ಯಧಿಕ ಅಂದರೆ 45.6 ಮಿ.ಮೀ ಮಳೆ ದಾಖಲಾಗಿದೆ. ಅದೇ ರೀತಿ ಹನುಮಸಾಗರದಲ್ಲಿ 18.1, ಹನುಮನಾಳದಲ್ಲಿ 7.6, ದೋಟಿಹಾಳ 4.4, ತಾವರಗೇರಾ 3.2 ಮತ್ತು ಕಿಲಾರಟ್ಟಿಯಲ್ಲಿ 1.2 ಮಿ.ಮೀ ಆಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ADVERTISEMENT

ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಹನುಮನಾಳ ಹೋಬಳಿಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸಜ್ಜೆ ಮತ್ತಿತರ ಬೆಳೆಗಳು ನೆಲಕ್ಕೆ ಒರಗಿದ್ದು ರೈತರಿಗೆ ಸಾಕಷ್ಟು ಹಾನಿ ಸಂಭವಿಸಿದೆ.

ತೆನೆ ಬಿಡುವ, ಕಾಳು ಕಟ್ಟುವ ಹಂತದಲ್ಲಿರುವ ಮತ್ತು ಕೊಯಿಲಿಗೆ ಬಂದಿದ್ದ ಸುಮಾರು 40-50 ಎಕರೆ ಪ್ರದೇಶದಲ್ಲಿನ ಸಜ್ಜೆ ನೆಲಕ್ಕೆ ಬಿದ್ದು ಸಂಪೂರ್ಣ ಹಾಳಾಗಿದೆ.

ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಅತ್ಯುತ್ತಮ ರೀತಿಯಲ್ಲಿ ಬೆಳೆದಿದ್ದ ಸಜ್ಜೆ ಬೆಳೆ ನೆಲಕ್ಕೆ ಬಿದ್ದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಜಹಗೀರಗುಡದೂರು ಗ್ರಾಮದ ರೈತ ಪರಸಪ್ಪ ಮಾಲಗಿತ್ತಿ ಅವರು ಅಳಲು ತೋಡಿಕೊಂಡರು.

ಮಳೆ ಗಾಳಿಯಿಂದ ಆಗಿರುವ ಬೆಳೆಹಾನಿಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ತಿಳಿಸಿದರು.

ಈ ಮಧ್ಯೆ ಬೆಳೆ ಹಾನಿ ಮಾಹಿತಿ ತಿಳಿದು ಹನುಮನಾಳ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಎಂ.ಎಸ್‌.ವಾಲಿ, ವಿ.ಎಂ.ಹಿರೇಮಠ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೇಲಧಿಕಾರಿಗಳಿಗೆ ಎರಡು ದಿನಗಳಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.