
ಕುಷ್ಟಗಿ: ‘ತಂತ್ರಜ್ಞಾನ ಜಗತ್ತಿನಾದ್ಯಂತ ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿಗೊಳ್ಳುತ್ತಿರುವ ಸಂತಸ ಒಂದೆಡೆಯಾದರೆ ಅದರಿಂದ ಆಗುತ್ತಿರುವ ಅನೇಕ ರೀತಿಯ ಅಪಾಯಗಳು ಗಾಬರಿ ಹುಟ್ಟಿಸುವಂತಿವೆ. ಸೈಬರ್ ಅಪರಾಧಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗುವುದು ತೀರಾ ಅಗತ್ಯ’ ಎಂದು ಇಲ್ಲಿಯ ಪೊಲೀಸ್ ಠಾಣೆಯ ಕಾನ್‌ಸ್ಟಬಲ್ ಬಸವರಾಜ ಅಂಬಾಡಿ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಜ್ಯೂನಿಯರ್ ಕಾಲೇಜಿನಲ್ಲಿ ಇನ್ನರ್‌ವ್ಹೀಲ್ ಕ್ಲಬ್ ದಿನಾಚರಣೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಂತರ್ಜಾಲ ಸಂಪರ್ಕದ ಮೊಬೈಲ್ ಬಳಕೆ ಅನಿವಾರ್ಯವಾಗಿದೆ ಆಗಿದೆ. ಹಣಕಾಸಿನ ವ್ಯವಹಾರಗಳಲ್ಲಿ ಅನೇಕ ಜನ ತಮಗೆ ಅರಿವಿಲ್ಲದೆ ಮೋಸಹೋಗಿ ಸಾಕಷ್ಟು ಹಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕ ಜನರು ಮೊಬೈಲ್‌ಗಳಲ್ಲಿ ಬರುವ ಅನಾಮಧೇಯ ಸಂದೇಶಗಳ ಹಿಂದೆ ಬಿದ್ದು ಬಹಳಷ್ಟು ತೊಂದರೆ ಅನುಭವಿಸುತ್ತಿರುವುದು ಸಾಮಾನ್ಯ. ಇದು ಭವಿಷ್ಯದಲ್ಲಿ ವೈಯಕ್ತಿಕ,ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆ ಇರುವುದರಿಂದ ಮೊಬೈಲ್‌ಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು’ ಎಂದರು.
ಯುವ ಸಬಲೀಕರಣ ವಿಷಯದ ಕುರಿತು ಡಾ.ಸೌಮ್ಯ ಪ್ರಾಯೋಗಿಕವಾಗಿ ವಿವರಿಸಿ ಮಾಹಿತಿ ನೀಡಿದರು.
ಇನ್ನರ್ ವ್ಹೀಲ್ ಕ್ಲಬ್ ಉಪಾಧ್ಯಕ್ಷೆ ಶಾರದಾ ಶೆಟ್ಟರ, ವಿದ್ಯಾರ್ಥಿಗಳಿಗೆ ವಿಜ್ಞಾನ, ವಾಣಿಜ್ಯ ವಿಷಯಗಳು ಹಾಗೂ ಜ್ಞಾನ ವಿಕಸನ ಕುರಿತ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಯುವ ಸಬಲೀಕರಣದ ಭಾಗವಾಗಿ ಪ್ರಗತಿ, ಅಶ್ವಿನಿ, ಕಾವೇರಿ ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಮೂಹ ನೃತ್ಯ ರೂಪಕ, ಮಹಾಭಾರತದ ಸನ್ನಿವೇಶ ಕುರಿತು ವಿದ್ಯಾರ್ಥಿ ಹನುಮಂತ ಅವರ ಏಕಪಾತ್ರಾಭಿನಯ ಗಮನಸೆಳೆದವು. ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಪ್ರಸಂಶನೆ ಪತ್ರ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯರು ಶ್ರೀಕಾಂತಗೌಡ ಪಾಟೀಲ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ, ಶಾರದಾ ಚೆಟ್ಟೇರ, ವಂದನಾ ಗೋಗಿ, ಕಾವೇರಿ ಕುಂದರಗಿ, ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.