ADVERTISEMENT

ಕೊಪ್ಪಳ | ಯುವಕನ ಮನೆಗೆ ಬೆಂಕಿ; ಜೀವ ಉಳಿಸಿದ ಮೊಬೈಲ್‌ ಚಾರ್ಜರ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 22:35 IST
Last Updated 16 ಅಕ್ಟೋಬರ್ 2025, 22:35 IST
<div class="paragraphs"><p> ಬೆಂಕಿ</p></div>

ಬೆಂಕಿ

   

ಯಲಬುರ್ಗಾ: ತಾಲ್ಲೂಕಿನ ಕೋನಸಾಗರ ಗ್ರಾಮದಲ್ಲಿ ದಲಿತ ಯುವಕನ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪದ ಮೇಲೆ ಎಂಟು ಜನರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್‌ ದಾಖಲಾಗಿದೆ.

18 ವರ್ಷದ ಮಣಿಕಂಠಯ್ಯ ಹರಿಜನ ಅವರು ಸ್ವಂತ ಮನೆ ಕಾಮಗಾರಿ ನಡೆಯುತ್ತಿದ್ದ ಕಾರಣ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಹೊಲಕ್ಕೆ ಹೊಂದಿಕೊಂಡು ಮನೆಯಿದ್ದು ಮುಂಭಾಗದಲ್ಲಿ ಚಪ್ಪರವಿದೆ. ಗುರುವಾರ ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಮೊಬೈಲ್‌ಗೆ ಚಾರ್ಜ್‌ ಹಾಕಲು ಎದ್ದಿದ್ದಾರೆ. ಆಗ ಬೆಂಕಿ ಹೊತ್ತಿ ಉರಿಯುವುದನ್ನು ಕಂಡು ಕೂಗಾಡಿದಾಗ, ಪಕ್ಕದ ಮನೆಯಲ್ಲಿದ್ದ ಅವರ ಮಾವ ಮೌನೇಶ ಬಂದು ರಕ್ಷಿಸಿದ್ದಾರೆ.

ADVERTISEMENT

‘ಕೊನಸಾಗರ ಗ್ರಾಮದ ಹನುಮಂತಪ್ಪ ನಾಗಪ್ಪ ಜೂಲಕಟ್ಟಿ, ಭೀಮಪ್ಪ ಹನಮಪ್ಪ ಜೂಲಕಟ್ಟಿ, ನಿಂಗಪ್ಪ ಹನಮಪ್ಪ ಜೂಲಕಟ್ಟಿ, ದೊಡ್ಡಬಸಪ್ಪ ಲಕ್ಕಲಕಟ್ಟಿ, ಮಲ್ಲಪ್ಪ ರಾಮಪ್ಪ ಭಜಂತ್ರಿ, ಚಿಕ್ಕಬನ್ನಿಗೋಳದ ಪ್ರವೀಣ ಪರಸಪ್ಪ ಹಟ್ಟಿ, ಹೊನ್ನಕೇರಪ್ಪ ಬಸಪ್ಪ ಹಟ್ಟಿ, ಬಾಳಪ್ಪ ಪರಸಪ್ಪ ಹಟ್ಟಿ ಅವರು ಈ ಕೃತ್ಯ ಎಸಗಿರುವ ಶಂಕೆಯಿದೆ’ ಎಂದು ಮಣಿಕಂಠ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ‘ಬೆಂಕಿ ಹಚ್ಚಿದವರು ಯಾರು ಎನ್ನುವುದು ನಿಖರವಾಗಿ ಗೊತ್ತಾಗಿಲ್ಲ. ಕೆಲವರ ಮೇಲೆ ಶಂಕೆ ವ್ಯಕ್ತಪಡಿಸಿ ಮಣಿಕಂಠ ದೂರು ನೀಡಿದ್ದಾರೆ. ಸವರ್ಣೀಯರ ಪಾತ್ರವಿದೆ ಎನ್ನುವ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.