
ಕೊಪ್ಪಳ: ದೇಶದ ರಾಜಧಾನಿ ದೆಹಲಿಯ ಕೆಂಪು ಕೋಟೆಯ ಸಮೀಪ ಸೋಮವಾರ ನಡೆದ ಕಾರ್ ಬಾಂಬ್ ಸ್ಪೋಟಗೊಂಡು ಹಲವರು ಅಸು ನೀಗಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕ್ರಮವಾಗಿ ಜಿಲ್ಲಾ ಪೊಲೀಸ್‌ನಿಂದ ನಗರದ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಯಿತು.
ನಗರದ ಕೇಂದ್ರೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾಡಳಿತ ಭವನ, ಜಿಲ್ಲಾ ಆಸ್ಪತ್ರೆ, ಉತ್ತರ ಕರ್ನಾಟಕದ ಪ್ರಸಿದ್ದ ಯಾತ್ರಾ ಸ್ಥಳ ಹುಲಿಗಿ ಹಾಗೂ ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯಸ ಬಳಿ ತಪಾಸಣೆ ಕೈಗೊಂಡ ಪೊಲೀಸರ ವಿಶೇಷ ತಂಡಗಳು ಅನುಮಾನಾಸ್ಪದ ವ್ಯಕ್ತಿಗಳು, ಲಗೇಜುಗಳು, ಪಾರ್ಸಲ್‌ಗಳು, ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು.
ಬೆಳಿಗ್ಗೆ ಒಂಬತ್ತೂವರೆ ಕೇಂದ್ರೀಯ ಬಸ್ ನಿಲ್ದಾಣದ ಆವರಣದಿಂದ ತಪಾಸಣೆ ಆರಂಭಗೊಂಡಿತು. ನಿಲ್ದಾಣದ ಕಾಂಪೌಂಡ್ ಮಗ್ಗಲುಗಳಲ್ಲಿ, ಶೌಚಾಲಯ, ಬಸ ಗಳ ಒಳಗೆ ನಡೆದ ತಪಾಸಣಾ ಪ್ರಕ್ರಿಯೆ ನೋಡಲು ಜನರು ಗುಂಪುಗೂಡಲಾರಂಭಿಸಿದರು. ಜನರನ್ನು ನಿಯಂತ್ರಿಸುವಲ್ಲಿಯೇ ಪೊಲೀಸರು ಹೈರಾಣಾದರು. ರೈಲು ನಿಲ್ದಾಣದಲ್ಲಿ ಟಿಕೆಟ್ ಕೌಂಟರ್, ಪ್ರಯಾಣಿಕರ ತಾತ್ಕಾಲಿಕ ತಂಗುದಾಣ, ಲಗೇಜುಗಳು, ರವಾನೆಯಾಗಬೇಕಿದ್ದ ಪಾರ್ಸಲ್‌ಗಳನ್ನು ಸಹ ಪೊಲೀಸರು ತಪಾಸಣೆ ನಡೆಸಿದರು.
ಅನುಮಾನ ಮೂಡಿಸಿದ ಪ್ಯಾಕೇಟು: ಕೇಂದ್ರೀಯ ಬಸ್ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅನುಮಾನಾಸ್ಪದವಾಗಿ ಕಂಡ ಬಸ್‌ನಲ್ಲಿ ಕುಳಿತಿದ್ದ ಬಿಹಾರ ಮೂಲದ ಯುವಕರ ತಂಡವೊಂದನ್ನು ಪೊಲೀಸರು ತಪಾಸಣೆ ನಡೆಸಿದರು. ಪೊಲೀಸ್ ಶ್ವಾನದಳದ ಬಿಂದು ಎಂಬ ಶ್ವಾನ ಅವರ ಬ್ಯಾಗುಗಳ ಬಳಿ ಪ್ರತಿಕ್ರಿಯಿಸಿದ ರೀತಿಯಿಂದಾಗಿ ತಪಾಸಣೆ ನಡೆಸುವಂತಾಯಿತು. ಅವರ ಬ್ಯಾಗುಗಳಲ್ಲಿ ಅಮಲು ಪದಾರ್ಥಗಳಂತಿದ್ದ ಪ್ಯಾಕೆಟ್‌ಗಳು ಗೋಚರವಾದವು. ಬಹುತೇಕ ಎಲ್ಲ ಯುವಕರ ಬ್ಯಾಗುಗಳಲ್ಲಿಯೂ ಅಂತಹ ಪ್ಲಾಸ್ಟಿಕ್ ಪ್ಯಾಕೇಟುಗಳಿದ್ದವು. ಮೇಲ್ನೋಟಕ್ಕೆ ಅವು ಗಾಂಜಾದ ಪ್ಯಾಕೇಟುಗಳೆಂದು ಭಾವಿಸಲಾಗಿತ್ತು. ಹಾಗಾಗಿ ಆ ಎಲ್ಲ ಯುವಕರನ್ನು ಆ ಪದಾರ್ಥಗಳ ಜೊತೆಗೆ ಹೆಚ್ಚಿನ ತಪಾಸಣೆಗಾಗಿ ಅವರನ್ನು ಕರೆದೊಯ್ಯಲಾಯಿತು.
ಈ ನಡುವೆ ಭಯಗೊಂಡ ಯುವಕರಿಬ್ಬರು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅವರನ್ನು ಹಿಡಿದು ತರುವಲ್ಲಿ ಪೊಲೀಸರು ಸಫಲರಾದರು. ಬಳಿಕ ಅವು ಗಾಂಜಾ ಅಲ್ಲ, ತಂಬಾಕಿನ ಪ್ಯಾಕೇಟುಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.