ADVERTISEMENT

ಗಂಗಾವತಿ: ಕಾರ್ಮಿಕ ವಿರೋಧಿ ಸಂಹಿತೆ ರದ್ದತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:18 IST
Last Updated 20 ಮೇ 2025, 15:18 IST
ಕೇಂದ್ರ ಸರ್ಕಾರ ಬಂಡವಾಳದ ಪರ ರೂಪಿಸಿದ ಕಾರ್ಮಿಕ ವಿರೋಧಿ ಸಂಹಿತೆಗಳನ್ನ ಕೂಡಲೇ ರದ್ದುಪಡಿಸಿ, ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ,ಸಿಐಟಿಯು ಗಂಗಾವತಿ ತಾಲ್ಲೂಕು ಸಮಿತಿ ಸದಸ್ಯರು ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಬಂಡವಾಳದ ಪರ ರೂಪಿಸಿದ ಕಾರ್ಮಿಕ ವಿರೋಧಿ ಸಂಹಿತೆಗಳನ್ನ ಕೂಡಲೇ ರದ್ದುಪಡಿಸಿ, ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ,ಸಿಐಟಿಯು ಗಂಗಾವತಿ ತಾಲ್ಲೂಕು ಸಮಿತಿ ಸದಸ್ಯರು ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.   

ಗಂಗಾವತಿ: ಕೇಂದ್ರ ಸರ್ಕಾರ ಬಂಡವಾಳದ ಪರ ರೂಪಿಸಿದ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೂಡಲೇ ರದ್ದುಪಡಿಸಿ, ದುಡಿತದ ಅವಧಿ ಹೆಚ್ಚಳ ವಾಪಸಾತಿ, ಕನಿಷ್ಠ ವೇತನ, ಸಾರ್ವತ್ರಿಕ ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಿಐಟಿಯು ಗಂಗಾವತಿ ತಾಲ್ಲೂಕು ಸಮಿತಿ ಸದಸ್ಯರು ಮಂಗಳವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ‘ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದ್ದು, ಶೇ 70ರಷ್ಟು ಕಾರ್ಮಿಕರು ಈ ಕಾರ್ಮಿಕ ಸಂಹಿತೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಸಂಹಿತೆಗಳಿಂದ ಕಾರ್ಮಿಕರ ಜೀವಿಸುವ, ವೇತನ, ಮುಷ್ಕರ, ಹೋರಾಟ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ. ಹೀಗಿದ್ದಾಗ ಇಂತಹ ಕಾರ್ಮಿಕ ವಿರೋಧಿ ಸಂಹಿತೆಗಳ ಅವಶ್ಯಕತೆ ಕಾರ್ಮಿಕರಿಗಿಲ್ಲ. ಕಾರ್ಮಿಕರಿಗೆ ರಾಜ್ಯದಲ್ಲಿ ದುಡಿತದ ಅವಧಿ ದಿನಕ್ಕೆ 12 ಗಂಟೆಗೆ ಹೆಚ್ಚಿಸಿದ ಆದೇಶ ಹಿಂಪಡೆಯಬೇಕು. ಜೀವನ ಯೋಗ್ಯ ಕನಿಷ್ಠ ವೇತನ ₹36 ಸಾವಿರ ನಿಗದಿ ಮಾಡಬೇಕು. ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ ₹8 ಸಾವಿರ ಪಿಂಚಣಿ ನೀಡಬೇಕು’ ಎಂದು ಆಗ್ರಹಿಸಿದರು.

‘ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ₹ 600 ಹೆಚ್ಚಿಸಿ, ದುಡಿತದ ದಿನಗಳನ್ನು 200ಕ್ಕೆ ಏರಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯ, ವಸತಿ ಒದಗಿಸಬೇಕು. ರೈತ ವಿರೋಧಿ ತಿದ್ದಪಡಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು’ ಎಂದು ಹೇಳಿದರು.

ADVERTISEMENT

ಸಿಐಟಿಯು ಗಂಗಾವತಿ ತಾಲ್ಲೂಕು ಸಮಿತಿ ಸದಸ್ಯರಾದ ಶಿವಣ್ಣ ಬೆಣಕಲ್, ಹುಸೇನಪ್ಪ ಕೆ., ಶ್ರೀನಿವಾಸ ಹೊಸಳ್ಳಿ, ಮರಿನಾಗಪ್ಪ, ಲಕ್ಷ್ಮಿದೇವಿ, ಗಿರಿಜಮ್ಮ, ಗಂಗಮ್ಮ, ಕೃಷ್ಣಪ್ಪ, ರಹೀಂ ಸಾಬ, ಮೇರಿ ಸೇರಿ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.