ಕುಷ್ಟಗಿ: ಪಟ್ಟಣದ 3ನೇ ವಾರ್ಡಿನ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಅಲ್ಲಿಯ ರಹವಾಸಿಗಳ ಸಂಘ ಒತ್ತಾಯಿಸಿದೆ.
ಈ ಕುರಿತು ಶನಿವಾರ ಇಲ್ಲಿ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ ಅವರಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು, ‘ಅಕ್ಕಪಕ್ಕದ ಕೆಲ ವ್ಯಕ್ತಿಗಳು ರಾಜಕಾಲುವೆಯನ್ನು ಅತಿಕ್ರಮಿಸಿ ಕಾಲುವೆಯ ಒಳಗೇ ಕಟ್ಟಡ ಕಟ್ಟಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಂತಿಬೇಲಿ ಅಳವಡಿಸಿಕೊಂಡಿದ್ದಾರೆ. ಹೀಗೆ ಬಿಟ್ಟರೆ ಇಲ್ಲಿ ರಾಜಕಾಲುವೆ ಎಂಬುದು ಇತ್ತು ಎಂದು ಹೇಳಲು ಹೆಸರಿಲ್ಲದಂತಾಗುತ್ತದೆ. ಹಾಗಾಗಿ ತಂತಿಬೇಲಿ, ಕಟ್ಟಡಗಳನ್ನು ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ರಾಜಕಾಲುವೆ ನಿರ್ಮಾಣಕ್ಕೆಂದು ಹಿಂದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಲಕ್ಷಾಂತರ ಅನುದಾನ ಬಿಡುಗಡೆಯಾತ್ತು. ಆದರೆ ಕೆಲವರ ತಕರಾರಿನಿಂದ ಕೆಲಸ ನಡೆಯದೆ ಹಣವೂ ಮರಳಿ ಹೋಗಿದ್ದು ದುರ್ದೈವದ ಸಂಗತಿ. ಆದರೆ ಈಗ ಕಾಲುವೆಯನ್ನೇ ಲಪಟಾಯಿಸಲು ಕೆಲ ವ್ಯಕ್ತಿಗಳು ಮುಂದಾಗಿರುವುದು ಕಂಡುಬಂದರೂ ಪುರಸಭೆಯವರು ಗಮನಹರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗಲಾದರೂ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿದರು.
ಅದೇ ರೀತಿ ಸದರಿ ವಾರ್ಡಿನಲ್ಲಿ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮನವಿ ಸಲ್ಲಿಸುತ್ತ ಬಂದರೂ ಪುರಸಭೆ ಕಣ್ತೆರೆದಿಲ್ಲ. ಉದಾಸೀನ ಮುಂದುವರಿದರೆ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ಹೇಳಿದರು.
ರಹವಾಸಿಗಳ ಸಂಘದ ಅಧ್ಯಕ್ಷ ಡಿ.ಬಿ.ಗಡೇದ, ವೀರಣ್ಣ ಪತ್ತಾರ, ಎಸ್.ಎನ್.ಘೋರ್ಪಡೆ, ಎ.ವೈ.ಲೋಕರೆ, ಮಹಾಂತೇಶ ಮಂಗಳೂರು, ಬಸವರಾಜ ಕೋಳೂರು, ಈಶಪ್ಪ ತಳವಾರ, ನಾರಾಯಣ ಈಳಗೇರ, ಶಂಕರಪ್ಪ ಗಾದಾರಿ, ಶರಣಗೌಡ ಪಾಟೀಲ, ಸಿದ್ದಪ್ಪ ಕೌದಿ, ಅಶೋಕ ಮಡಿವಾಳರ, ಶರಣಪ್ಪ ಪಟ್ಟಣಶೆಟ್ಟರ, ವೀರಬಸಪ್ಪ ಕಲಾಲಬಂಡಿ, ಸಂಗನಗೌಡ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.