ADVERTISEMENT

ಯಲಬುರ್ಗಾ: ಸಕಾಲಕ್ಕೆ ಬೀಜ ಗೊಬ್ಬರ ವಿತರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:26 IST
Last Updated 19 ಮೇ 2025, 14:26 IST
ಯಲಬುರ್ಗಾ ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಜೆಡಿಎಸ್ ಮುಖಂಡರು ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು 
ಯಲಬುರ್ಗಾ ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಜೆಡಿಎಸ್ ಮುಖಂಡರು ಸಕಾಲದಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು    

ಯಲಬುರ್ಗಾ: ‘ಮುಂಗಾರು ಹಂಗಾಮು ಆರಂಭಗೊಂಡಿದ್ದು, ತಾಲ್ಲೂಕಿನ ಬಹುತೇಕ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಸಿದ್ಧತೆ ಕೈಗೊಂಡಿದ್ದಾರೆ. ಹೀಗಾಗಿ ಬೀಜ ಮತ್ತು ಗೊಬ್ಬರ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಜೆಡಿಎಸ್ ಮುಖಂಡರಾದ ತಾ.ಪಂ ಮಾಜಿ ಸದಸ್ಯ ಮಲ್ಲನಗೌಡ ಕೋನನಗೌಡ್ರ, ಬಸವರಾಜ ಗುಳಗುಳಿ, ಶರಣಪ್ಪ ರಾಂಪೂರ, ಕೆಂಚಪ್ಪ ಹಳ್ಳಿ ಇತರರು ಕೃಷಿ ಇಲಾಖೆ ಅಧಿಕಾರಿ ಶಿವಾನಂದ ಮಾಳಗಿ ಅವರಿಗೆ ಮನವಿ ಸಲ್ಲಿಸಿದರು.

ಒಂದು ವಾರದಿಂದ ಮಳೆ ಸುರಿಯುತ್ತಿದೆ. ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಭೂಮಿಯನ್ನು ಬಿತ್ತನೆಗೆ ಹದಗೊಳಿಸುತ್ತಿದ್ದಾರೆ. ಗುಣಮಟ್ಟದ ವಿವಿಧ ಬೆಳೆಗಳ ಬೀಜಗಳು ಹಾಗೂ ಡಿಎಪಿ ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆಗೆ ಪೂರ್ವ ತಯಾರಿ ಮಾಡಿಕೊಳ್ಳಬೇಕಾಗಿದೆ. ಹಾಗೆಯೇ ಬೇವೂರು ಮತ್ತು ತಳಕಲ್ಲ ಗ್ರಾಮಗಳಲ್ಲಿ ಎರಡು ಹೆಚ್ಚುವರಿ ಬೀಜ ವಿತರಣಾ ಕೇಂದ್ರ ಸ್ಥಾಪಿಸಿ, ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ತಾಲ್ಲೂಕಿನಲ್ಲಿ ಹಿಂದೆ ಗೊಬ್ಬರವನ್ನು ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾರೆ. ಹೀಗೆ ಅಕ್ರಮ ದಂಧೆಯು ಮತ್ತೆ ಮರುಕಳಿಸದಂತೆ ಮುಂಜಾಗ್ರತೆ ಕ್ರಮ ಅನುಸಿರಿಸಬೇಕು. ಬೀಜ ಮತ್ತು ವಿತರಣಾ ಕೇಂದ್ರದಲ್ಲಿ ಬೀಜಗಳು ಸಂಗ್ರಹಣೆಯ ವಿವರಣೆ ಹಾಗೂ ದರಪಟ್ಟಿಯು ಕಡ್ಡಾಯವಾಗಿ ಪ್ರದರ್ಶಿಸಲು ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಅಕ್ರಮವಾಗಿ ಹಾಗೂ ಹೆಚ್ಚಿನ ದರದಲ್ಲಿ ಬೀಜ ಗೊಬ್ಬರ ಮಾರಾಟ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.