ADVERTISEMENT

ಮುನಿರಾಬಾದ್: ಕಾಲುವೆಗೆ ನೀರು ಹರಿಸಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:14 IST
Last Updated 4 ಜುಲೈ 2025, 13:14 IST
ಖಾಜಾಹುಸೇನ್ ದೊಡ್ಮನಿ
ಖಾಜಾಹುಸೇನ್ ದೊಡ್ಮನಿ   

ಮುನಿರಾಬಾದ್: ತುಂಗಭದ್ರಾ ಜಲಾಶಯದಿಂದ ಎಡದಂಡೆ ಮೇಲ್ಮಟ್ಟದ ಕಾಲುವೆಗೆ(ಎಚ್ಎಲ್‌ಸಿ) ತಕ್ಷಣ ನೀರು ಹರಿಸಬೇಕು ಎಂದು ಕಾಲುವೆ ಅಚ್ಚುಕಟ್ಟು ಭಾಗದ ರೈತರು ಅಗ್ರಹಿಸಿದ್ದಾರೆ.

ಮುನಿರಾಬಾದ್, ಹೊಸಹಳ್ಳಿ, ಹೊಸಲಿಂಗಾಪುರ, ಹಿಟ್ನಾಳ, ಬೇವಿನಹಳ್ಳಿ, ಲಿಂಗದಹಳ್ಳಿ ಹಾಗೂ ಶಹಾಪುರ ಗ್ರಾಮದ ಜಮೀನುಗಳಿಗೆ ನೀರು ಒದಗಿಸುವ ಕಾಲುವೆಗೆ ತಕ್ಷಣ ನೀರು ಹರಿಸಬೇಕು. ರೈತರು ಭತ್ತದ ಬೆಳೆಗೆ ಜಮೀನು ಸಿದ್ಧಪಡಿಸಲು ನೀರಿನ ಅವಶ್ಯಕತೆ ಇದೆ ಎಂದು ಹೊಸಹಳ್ಳಿ ಗ್ರಾಮದ ರೈತ ಮುಖಂಡ ಖಾಜಾಹುಸೇನ್ ದೊಡ್ಮನಿ, ಬೇವಿನಹಳ್ಳಿ ರೈತ ಸಂಘದ ಮುಖಂಡ ಹನುಮಂತಪ್ಪ ಕೆ.ಎಸ್. ಆಗ್ರಹಿಸಿದ್ದಾರೆ.

ಈ ಬಗ್ಗೆ ಅಸಮಾಧಾನ ಹೊರಹಾಕಿದ ರೈತರು, ‘ಮೂರ್ನಾಲ್ಕು ದಿನದಿಂದ ಜಲಾಶಯದಿಂದ ನದಿಗೆ ಸಾವಿರಾರು ಕ್ಯುಸೆಕ್‌ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಆದರೆ ಅಧಿಕಾರಿಗಳು ಕಾಲುವೆ ದುರಸ್ತಿ ನೆಪವೊಡ್ಡಿ ನೀರು ಬಿಡಲು ನೀನ ಮೇಷ ಎಣಿಸುತ್ತಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕಾಲುವೆಯಲ್ಲಿ ನೀರು ಇಲ್ಲದ ಸಮಯ(ಕ್ಲೋಸರ್ ಪಿರೇಡ್) ದುರಸ್ತಿ ಕಾರ್ಯ ಕೈಗೊಳ್ಳಬಹುದಾಗಿತ್ತು. ಆದರೆ ಕಾಲುವೆಗೆ ನೀರು ಬಿಡುವ ಸಮಯದಲ್ಲಿ ಕೆಲವು ಕಡೆ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದಾರೆ. ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ(ಐಸಿಸಿ) ಸಭೆಯಲ್ಲಿ ನಿರ್ಧರಿಸಿದಂತೆ, ಜುಲೈ 1ರಿಂದ 25 ಕ್ಯುಸೆಕ್‌ ನೀರು ಹರಿಸಲು ಅವಕಾಶವಿದೆ. ಸಂಬಂಧಪಟ್ಟವರು ತಕ್ಷಣ ಇದಕ್ಕೆ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.