ADVERTISEMENT

ಖಾತ್ರಿ ಕೆಲಸ ನೀಡಲು ಒತ್ತಾಯ: ಸಿಪಿಐಎಂ ನೇತೃತ್ವದಲ್ಲಿ ಕೃಷಿ ಕೂಲಿಕಾರರ ಪ್ರತಿಭಟನೆ

ಸಿಪಿಐಎಂ ನೇತೃತ್ವದಲ್ಲಿ ಕೃಷಿ ಕೂಲಿಕಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 5:22 IST
Last Updated 20 ಸೆಪ್ಟೆಂಬರ್ 2020, 5:22 IST
ಕೊಪ್ಪಳದ ತಹಶೀಲ್ದಾರ್‌ ಕಚೇರಿ ಎದುರು ಶನಿವಾರ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ದ ತಾಲ್ಲೂಕು ಸಮಿತಿಯಿಂದ ಪ್ರತಿಭಟನೆ ನಡೆಯಿತು
ಕೊಪ್ಪಳದ ತಹಶೀಲ್ದಾರ್‌ ಕಚೇರಿ ಎದುರು ಶನಿವಾರ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ದ ತಾಲ್ಲೂಕು ಸಮಿತಿಯಿಂದ ಪ್ರತಿಭಟನೆ ನಡೆಯಿತು   

ಕೊಪ್ಪಳ: ಜನ ಸಂರಕ್ಷಣೆ ಯ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ದ ತಾಲ್ಲೂಕು ಸಮಿತಿಯಿಂದ ನಗರದ ತಹಶೀಲ್ದಾರ್‌ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಸಮರ್ಪಕವಾಗಿ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಿದ ಕೂಲಿಕಾರರಿಗೆ ಯಾವುದೇ ಕಾರಣಕ್ಕೂ ಕೂಲಿ ಹಣ ಕಡಿತ ಮಾಡಬಾರದು. ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಿದ ಕೂಲಿಕಾರರಿಗೆ ಕೆಲಸ ಮುಗಿದ ಒಂದು ವಾರದ ಒಳಗೆ ಎಫ್.ಟಿ.ಓ. ಕಾಪಿ ನೀಡಬೇಕು.ನರೇಗಾ ಯೋಜನೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಸಕಾಲದಲ್ಲಿ ಉದ್ಯೋಗ ಒದಗಿಸಬೇಕು. ಒದಗಿಸದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಕೃಷಿ ಕೂಲಿಕಾರರು ಆಗ್ರಹಿಸಿದರು.

ಖಾತ್ರಿ ಯೋಜನೆ ಕೆಲಸದ ಸ್ಥಳದಲ್ಲಿ ಜೆ.ಇ.ಗಳ ಕಿರುಕುಳ ನಿಲ್ಲಬೇಕು. ಕೆಲಸ ಮಾಡುವ ಕೂಲಿಕಾರರಿಗೆ ಗ್ರಾಮ ಪಂಚಾಯಿತಿಗಳಲ್ಲಿ ವಾರ್ಷಿಕ ಕ್ರಿಯಾ ಯೋಜನೆಯ ಪ್ರತಿಯನ್ನು ನೀಡಬೇಕು. ಗ್ರಾಮಗಳ ಕೂಲಿಕಾರರು ಹೊಸ ಜಾಬ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೆ ಒಂದು ವಾರದ ಒಳಗಡೆ ಜಾಬ್ ಕಾರ್ಡ್‌ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ಪರಿಕರಗಳು, ಶುದ್ಧ ಕುಡಿಯುವ ನೀರು, ನೆರಳು, ಮಾಸ್ಕ್, ಸ್ಯಾನಿಟೈಸರ್, ಪ್ರಥಮ ಆರೋಗ್ಯ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.

ಹಿರೇಬಗನಾಳ, ಹಿರೇಕಾಸನಕಂಡಿ, ಗುಳದಳ್ಳಿ ಗ್ರಾಮ ಪಂಚಾಯಿತಿಯ ಗಬ್ಬೂರು, ಬಹದ್ದೂರಬಂಡಿ ಗ್ರಾಮ ಪಂಚಾಯಿತಿಯ ಚುಕ್ಕನಕಲ್, ಕೋಳೂರು ಗ್ರಾಮ ಪಂಚಾಯಿತಿಯ ಮಂಗಳಾಪೂರ, ಗುನ್ನಳ್ಳಿ, ಕಾತರಕಿ-ಗುಡ್ಲಾನೂರ ಗ್ರಾಮ ಪಂಚಾಯಿತಿಯ ಬೇಳೂರು, ಅಳವಂಡಿ ಗ್ರಾಮ ಪಂಚಾಯಿತಿಯ ಅಳವಂಡಿ ಗ್ರಾಮಗಳ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಸಿಪಿಐಎಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಖಾಸಿಂಸಾಬ್‌ ಸರ್ಧಾರ್‌, ಸುಂಕಪ್ಪ ಗದಗ, ಶೇಖಪ್ಪ ಚೌಡ್ಕಿ, ಹುಲಗಪ್ಪ ಗೋಕಾವಿ, ಹುಸೇನ್‌ಸಾಬ್‌ ನದಾಫ್‌, ರಾಮಣ್ಣ ದೊಡ್ಡಮನಿ, ಗುಲಾಮಸಯ್ಯಾದ ಹುಸೇನ್‌, ಸಂಜಯ್‌ದಾಸ್‌, ಫಕೀರಮ್ಮ ಗೌರಿಪುರ, ಪಾರಮ್ಮ ಗದ್ದಿ, ಅನ್ನಮ್ಮ ಹಲಗೇರಿ, ಬಿಬಿಜಾನ್‌, ಕರಿಯಮ್ಮ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.