ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿಯಲ್ಲಿ ದಲಿತರು ಕ್ಷೌರ ಮಾಡುವಂತೆ ಕೇಳಿದ್ದರಿಂದ ಅಂಗಡಿ ಬಂದ್ ಮಾಡಿದ್ದ ಪ್ರಕರಣದ ಸಂಬಂಧ ಬುಧವಾರ ಸಭೆ ನಡೆದಿದ್ದು, ಇಂಥ ಘಟನೆ ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ‘ದಲಿತರು ಕ್ಷೌರ ಕೇಳಿದ್ದಕ್ಕೆ ಅಂಗಡಿಯೇ ಬಂದ್’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ವರದಿ ಆಧರಿಸಿ ಸಭೆ ನಡೆಸಿರುವ ಅಧಿಕಾರಿಗಳು, ‘ದೇವಾಲಯ, ಹೋಟೆಲ್ ಹಾಗೂ ಕ್ಷೌರದ ಅಂಗಡಿಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿರಬೇಕು. ದಲಿತರು ಎಂದು ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು’ ಎಂದು ಮುದ್ದಾಬಳ್ಳಿಯ ಕ್ಷೌರಿಕರಿಗೆ ಎಚ್ಚರಿಕೆ ನೀಡಿದರು.
ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿಯೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಲಿತ ವ್ಯಕ್ತಿಯೊಬ್ಬರಿಗೆ ಅದೇ ಗ್ರಾಮದ ಕ್ಷೌರಿಕರಿಂದ ಕ್ಷೌರ ಮಾಡಿಸಿದರು.
‘ಅಸ್ಪೃಶ್ಯತೆ ಆಚರಣೆಗೆ ಅವಕಾಶ ಇರುವುದಿಲ್ಲ. ಇದನ್ನು ಇಲಾಖೆ ಒಪ್ಪುವುದೂ ಇಲ್ಲ. ಒಂದು ವೇಳೆ ಇದೇ ರೀತಿಯ ಘಟನೆ ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.