ADVERTISEMENT

ಸಮೀಕ್ಷೆಯಿಂದ ಹೊರಗುಳಿದ ದೇವದಾಸಿ ಮಹಿಳೆಯರನ್ನು ಪರಿಗಣಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 7:26 IST
Last Updated 24 ಅಕ್ಟೋಬರ್ 2025, 7:26 IST
ಗಂಗಾವತಿ ನಗರದ ಸಿಡಿಪಿಒ ಕಚೇರಿ ಎದುರು ಗುರುವಾರ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲ್ಲೂಕು ಸಮಿತಿ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು
ಗಂಗಾವತಿ ನಗರದ ಸಿಡಿಪಿಒ ಕಚೇರಿ ಎದುರು ಗುರುವಾರ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲ್ಲೂಕು ಸಮಿತಿ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು   

ಪ್ರಜಾವಾಣಿ ವಾರ್ತೆ

ಗಂಗಾವತಿ: ಸಮೀಕ್ಷೆ ಪಟ್ಟಿಯಿಂದ ಹೊರಗುಳಿದ ದೇವದಾಸಿ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರನ್ನು ಕೂಡಲೇ ಪಟ್ಟಿಗೆ ಸೇರಿಸಿ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲ್ಲೂಕು ಸಮಿತಿ ಸಿಡಿಪಿಒ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.

ತಾಲ್ಲೂಕು ಸಮಿತಿ ಅಧ್ಯಕ್ಷೆ ಜಿ.ಹುಲಿಗೆಮ್ಮ ಮಾತನಾಡಿ, ‘ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ನಿರಂತರವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಾ ಬಂದಿದ್ದು, ದೌರ್ಜನ್ಯದ ದೇವದಾಸಿ ಪದ್ಧತಿ ರದ್ದತಿಗೆ ದೇವದಾಸಿ ನಿಷೇಧ ಮಸೂದೆ-2025 ಜಾರಿ ಮಾಡಿರುವುದು ಶ್ಲಾಘನೀಯ. ಈಚೆಗೆ ದೇವದಾಸಿ ಮಹಿಳೆಯರ ಮತ್ತು ಕುಟುಂಬಸ್ಥರ ಮರು ಸಮೀಕ್ಷೆ ನಡೆಸಿದ್ದು, ದೇವದಾಸಿಗಳಿದ್ದರೂ ಸಮೀಕ್ಷೆ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ಅವರಿಗೆ ಮತ್ತು ಮಕ್ಕಳಿಗೆ ಪ್ರಮಾಣಪತ್ರ ನೀಡದೆ, ಪಟ್ಟಿಯಿಂದ ದೂರ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ’ ಎಂದರು.

ADVERTISEMENT

‘ಪಟ್ಟಿಯಿಂದ ಹೊರಗುಳಿದ ದೇವದಾಸಿ ಮಹಿಳೆಯರು ಮತ್ತು ಕುಟುಂಬಸ್ಥರನ್ನು ಪಟ್ಟಿಗೆ ಸೇರಿಸಿ 2026ರ ಬಜೆಟ್‌ನಲ್ಲಿ ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಸಮಿತಿ ಕಾರ್ಯದರ್ಶಿ ಮಂಜುನಾಥ ಡಗ್ಗಿ, ನಿರುಪಾದಿ ಬೆಣಕಲ್, ಎಂ.ಬಸವರಾಜ, ಹುಸೇನಪ್ಪ, ಮರೀನಾ ಗಪ್ಪಡಗ್ಗಿ, ದುರ್ಗಮ್ಮ, ನಾಗಮ್ಮ, ಈರಮ್ಮ, ಗಂಗಮ್ಮ, ಕವಿತಾ, ಭಾಗಮ್ಮ, ಕೆಂಚಮ್ಮ, ಯಮನಮ್ಮ, ಹುಲಿಗೆಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.