ADVERTISEMENT

ದೇವನಹಳ್ಳಿ ಭೂ ಹೋರಾಟ ಯಶಸ್ವಿ: ಕೊಪ್ಪಳದಲ್ಲಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 6:08 IST
Last Updated 16 ಜುಲೈ 2025, 6:08 IST
ಕೊಪ್ಪಳದ ಅಶೋಕ ವೃತ್ತದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ವಿಜಯೋತ್ಸವ ಆಚರಿಸಿದರು
ಕೊಪ್ಪಳದ ಅಶೋಕ ವೃತ್ತದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ವಿಜಯೋತ್ಸವ ಆಚರಿಸಿದರು   

ಕೊಪ್ಪಳ: ದೇವನಹಳ್ಳಿ ಭೂ ಹೋರಾಟಕ್ಕೆ ಜಯ ಲಭಿಸಿದ್ದಕ್ಕೆ ಇಲ್ಲಿನ ಅಶೋಕ ವೃತ್ತದಲ್ಲಿ ಮಂಗಳವಾರ ಕಾರ್ಖಾನೆ ವಿಸ್ತರಣೆ ವಿರೋಧಿ ಹೋರಾಟಗಾರರು, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಸದಸ್ಯರು ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ಸುದೀರ್ಘ ಹೋರಾಟದ ನಂತರ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ರೈತಪರ ಎಂಬ ಸಂದೇಶ ನೀಡಿದ್ದು ಭೂಮಿಯ ಸ್ವಾಧೀನ ಕೈಬಿಟ್ಟಿರುವುದು ಸ್ವಾಗತಾರ್ಹ. ಅದರಂತೆ ಕೊಪ್ಪಳ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಕಾರ್ಖಾನೆ, ಅಭಿವೃದ್ಧಿ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದನ್ನು ಕೂಡ ಕೈಬಿಡಬೇಕು. ಕೃಷಿ ಭೂಮಿ ಉಳಿಯಬೇಕು’ ಎಂದು ಆಗ್ರಹಿಸಿದರು.

‘ದೇವನಹಳ್ಳಿ ಮಾದರಿಯಲ್ಲಿ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಮೋಸದಿಂದ ಹೆಸರು ಬದಲಿಸಿಕೊಂಡು ಬಂದಿರುವ ಬಲ್ಡೋಟಾದ ಉಕ್ಕಿನ ಕಾರ್ಖಾನೆ ಸೇರಿದಂತೆ ಜನರಿಗೆ ಮಾರಕವಾಗಿರುವ ಎಲ್ಲಾ ಕಾರ್ಖಾನೆಗಳನ್ನು  ಕೊಪ್ಪಳದಿಂದ ಸ್ಥಳಾಂತರ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮುಖಂಡ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ ‘ಆಗಸ್ಟ್‌ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳಕ್ಕೆ ಬರುತ್ತಿದ್ದಾರೆ. ಅಂದು ಅವರು ಬಲ್ಡೋಟಾ ಹಾಗೂ ಕಿರ್ಲೋಸ್ಕರ್ ಕಾರ್ಖಾನೆಗಳ ವಿಸ್ತರಣೆಗೆ ನೀಡಿರುವ ಅನುಮತಿ ಅಧಿಕೃತವಾಗಿ ರದ್ದುಗೊಳಿಸಿ ಆದೇಶ ನೀಡಿದರೆ ಅವರ ಜನ್ಮದಿನವನ್ನು ಇಲ್ಲಿನ ಜನರೇ ದೊಡ್ಡಮಟ್ಟದಲ್ಲಿ ಅತ್ಯಂತ ಸಡಗರದಿಂದ ಆಚರಿಸುತ್ತಾರೆ’ ಎಂದು ಹೇಳಿದರು.

ಹೋರಾಟಗಾರರಾದ ಬಸವರಾಜ ಶೀಲವಂತರ, ಕೆ. ಬಿ. ಗೋನಾಳ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಭೀಮಸೇನ ಕಲಕೇರಿ, ತಿಪ್ಪಯ್ಯಸ್ವಾಮಿ ಹೊಲಗೇರಿ, ಕನಕಪ್ಪ  ಪೂಜಾರ, ಬಂದೇನವಾಜ್ ಮಣಿಯಾರ, ಗಾಳೆಪ್ಪ ಮುಂಗೋಲಿ, ಕಾಸೀಂ ಸರ್ದಾರ್, ನಾಗರಾಜ್ ಜಿ., ಮಕ್ಬೂಲ್ ರಾಯಚೂರು, ಪರಶುರಾಮ ವಣಗೇರಿ ಇಂದರಗಿ, ಮುತ್ತುರಾಜ್ ಹಡಪದ, ಗವಿಸಿದ್ದಪ್ಪ ಹಲಿಗಿ ಕುಣಿಕೇರಿ, ರಮೇಶ ಬೂದಗುಂಪಿ, ಮುದುಕಪ್ಪ ಹೊಸಮನಿ, ಆನಂದ ಗೊಂಡಬಾಳ, ಗವಿಸಿದ್ದಪ್ಪ ಹಂಡಿ ಪಾಲ್ಗೊಂಡಿದ್ದರು.

ಎಸ್‌ಯುಸಿಐ ಸ್ವಾಗತ

ಕೊಪ್ಪಳ: ಭೂ ಸ್ವಾಧೀನ ಪ್ರಕ್ರಿಯೆ ರದ್ದುಮಾಡುವ ಸರ್ಕಾರದ ಕ್ರಮವನ್ನು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯು ಸ್ವಾಗತಿಸಿದೆ. ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಉಮಾ ಪತ್ರಿಕಾ ಹೇಳಿಕೆ ನೀಡಿದ್ದು ‘ನಿರಂತರವಾಗಿ ಮೂರು ವರ್ಷಗಳ ಕಾಲ ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಎದೆಗುಂದದೆ ಹೋರಾಡಿದ ರೈತರ ಕಾರ್ಯ ಅಭಿನಂದನಾರ್ಹ. ರಾಜಿರಹಿತ ಹೋರಾಟದ ಮೂಲಕ ಮಾತ್ರವೇ ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂಬುದು ಮತ್ತೆ ಸಾಬೀತಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.