ADVERTISEMENT

ಕೊಪ್ಪಳ: 105 ಕೆ.ಜಿ. ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮಂತಪ್ಪ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 4:50 IST
Last Updated 2 ಏಪ್ರಿಲ್ 2023, 4:50 IST
ಹನುಮಂತಪ್ಪ ಪೂಜಾರ ಅವರು 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾನೆ.
ಹನುಮಂತಪ್ಪ ಪೂಜಾರ ಅವರು 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾನೆ.   

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮದ 34 ವರ್ಷದ ಹನುಮಂತಪ್ಪ ಪೂಜಾರ ಎಂಬ ಯುವಕ ಭಾನುವಾರ 105 ಕೆ.ಜಿ. ತೂಕದ ಅಕ್ಕಿ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾನೆ.

ಬೆಳಿಗ್ಗೆ 6 ಗಂಟೆಗೆ ಬೆಟ್ಟ ಏರುವುದನ್ನು ಆರಂಭಿಸಿ 50 ನಿಮಿಷಗಳಲ್ಲಿ 575 ಮೆಟ್ಟಿಲುಗಳನ್ನು ಹತ್ತಿ ಎಲ್ಲರ ಗಮನ ಸೆಳೆದರು.

ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ ಆಂಜನೇಯನ ದರ್ಶನ ಪಡೆಯಬೇಕು ಎಂದು ಹಲವು ವರ್ಷಗಳಿಂದ ಕಾಯುತ್ತಿದ್ದರು. ಮೊದಲ ಬಾರಿಗೆ ಬೆಟ್ಟ ಹತ್ತಿದ‌ ನೆನಪನ್ನು ಸ್ಮರಣೀಯವಾಗಿರಿಸಬೇಕು ಎನ್ನುವ ಕಾರಣಕ್ಕೆ ಅಕ್ಕಿ‌ಚೀಲ ಹೊತ್ತು ಹತ್ತಲು ನಿರ್ಧರಿಸಿದ್ದರು.

ADVERTISEMENT

ಚೀಲ ಹೊತ್ತು ಬೆಟ್ಟ ಹತ್ತಬೇಕು ಎನ್ನುವ ಬಹಳ ದಿನಗಳ ಕನಸು ಈಗ ಈಡೇರಿದೆ. ನನ್ನ ಆಸೆಗೆ ಊರಿನ ಸ್ನೇಹಿತರು ನೆರವಾದರು. ಬಿಸಿಲು ಹೆಚ್ಚಾಗುವ ಮೊದಲೇ ಬೆಟ್ಟ ಹತ್ತಿ ಇಳಿಯಬೇಕು ಎಂದು ನಿರ್ಧರಿಸಿದ್ದೆ. ಅಂದುಕೊಂಡಂತೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಹನುಮಂತಪ್ಪ ಪ್ರಜಾವಾಣಿ ಜೊತೆ ಅನಿಸಿಕೆ ಹಂಚಿಕೊಂಡರು.

ಕಳೆದ ವಾರ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ ರಾಯಪ್ಪ ದಫೇದಾರ ಎಂಬುವರು 101 ಕೆ.ಜಿ. ತೂಕದ ಜೋಳದ ಚೀಲ ಹೊತ್ತು ಬೆಟ್ಟ ಹತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.