ADVERTISEMENT

ಗಡಚಿಂತಿ: ಪೀರಾ ದೇವರ ಪುನರ್ ಪಂಜೆ ದರ್ಶನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 2:32 IST
Last Updated 13 ಫೆಬ್ರುವರಿ 2021, 2:32 IST
ಗಡಚಿಂತಿ ಗ್ರಾಮದ ಯಮನೂರಪೀರಾ ದರ್ಗಾದಲ್ಲಿ ಶುಕ್ರವಾರ ಪೀರಾ ದೇವರ ಪುನರ್ ಪಂಜೆ ದರ್ಶನ ಕಾರ್ಯಕ್ರಮ ನಡೆಯಿತು
ಗಡಚಿಂತಿ ಗ್ರಾಮದ ಯಮನೂರಪೀರಾ ದರ್ಗಾದಲ್ಲಿ ಶುಕ್ರವಾರ ಪೀರಾ ದೇವರ ಪುನರ್ ಪಂಜೆ ದರ್ಶನ ಕಾರ್ಯಕ್ರಮ ನಡೆಯಿತು   

ಹನುಮಸಾಗರ: ಸಮೀಪದ ಗಡಚಿಂತಿ ಗ್ರಾಮದ ಯಮನೂರಪೀರಾ ದರ್ಗಾದಲ್ಲಿ ಶುಕ್ರವಾರ ಪೀರಾ ದೇವರ ಪುನರ್ ಪಂಜೆ ದರ್ಶನ ಧಾರ್ಮಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಮೊಹರಂ ಮುಗಿದು ಆರು ತಿಂಗಳ ನಂತರದಲ್ಲಿ ಪೀರಾ ದೇವರ ಪುನರ್ ಪಂಜೆ ದರ್ಶನ ಕಾರ್ಯಕ್ರಮ ಈ ಗ್ರಾಮದಲ್ಲಿ ಪ್ರತಿವರ್ಷ ನಡೆಯುತ್ತದೆ. ಗಡಚಿಂತಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳಿಲ್ಲದಿದ್ದರೂ ಬೇರೆ ಗ್ರಾಮಗಳಿಂದ ಖಾಜಿಗಳನ್ನು ಕರೆಯಿಸಿ ಅವರ ಮೂಲಕ ಪೂಜೆಯ ವಿಧಿವಿಧಾನಗಳನ್ನು ನಡೆಸಿ ಹಿಂದೂಗಳು ಭಕ್ತಿಭಾವದಿಂದ ಈ ಹಬ್ಬವನ್ನು ಆಚರಿಸಿದರು.

ಮುಖಂಡ ಯಮನೂರಪ್ಪ ಅಬ್ಬಿಗೇರಿ ಈ ಕುರಿತು ಮಾಹಿತಿ ನೀಡಿ, ನಮ್ಮ ಗ್ರಾಮದಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಜನರು ಇಲ್ಲ, ಭಾವೈಕ್ಯದ ಸಂಕೇತವಾಗಿ ಅನಾದಿ ಕಾಲದಿಂದಲೂ ಮೊಹರಂ ಹಬ್ಬಂದತೆ ಪೀರಾ ದೇವರ ಪುನರ್ ಪಂಜೆ ದರ್ಶನ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ಹಿಂದೂಗಳೇ ಆಚರಿಸಿಕೊಂಡು ಬರುತ್ತಿದ್ದೇವೆ. ಈಗ ಜಾತ್ರೆಯ ರೀತಿಯಲ್ಲಿ ಗಂಧ, ಉರುಸು, ಭಕ್ತರ ಹರಕೆ ತೀರಿಸುವಂತಹ ಧಾರ್ಮಿಕ ಕಾರ್ಯಕ್ರಗಳು ನಡೆಯುತ್ತಿವೆ ಎಂದು ಹೇಳಿದರು.

ADVERTISEMENT

ಸುತ್ತಲಿನ ಗ್ರಾಮಗಳಾದ ಹಾಬಲಕಟ್ಟಿ, ಮಾಸ್ತಕಟ್ಟಿ, ಮಾಲಗಿತ್ತಿ, ವಾರಿಕಲ್ಲ, ಚಿಕ್ಕಗೊಣ್ಣಾಗರ, ಹಿರೇಗೊಣ್ಣಾಗರ ಗ್ರಾಮದ ಭಕ್ತರು ಪಾಲ್ಗೊಂಡು ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸುವುದರ ಜೊತೆಗೆ ತಮ್ಮ ಹರಕೆಗಳನ್ನು ತೀರಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಗ್ರಾಮದ ಪ್ರಮುಖರಾದ ಶರಣಪ್ಪಜ್ಜ ವಾಲಿಕಾರ, ಫಕೀರಪ್ಪಜ್ಜ ಬೀಳಗಿ, ಶರಣಪ್ಪ ದಂಡಿನ, ಶರಣಪ್ಪ ಗರೇಬಾಳು, ಗ್ರಾಮ ಪಂಚಾಯಿತಿ ಸದಸ್ಯರಾದ ಹನಮವ್ವ ರಾಜೂರು, ಮಲ್ಲಪ್ಪ ಭೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.