ಕೊಪ್ಪಳ: ‘ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನಗರದ ಪ್ರಮುಖ ಬೀದಿಗಳಲ್ಲಿ ಬುಧವಾರ ಜಿಲ್ಲಾ ಜೈನ ಸಮಾಜ ಮತ್ತು ಧರ್ಮಸ್ಥಳ ಭಕ್ತವೃಂದದ ನೇತೃತ್ವದಲ್ಲಿ ಜನರು ಜನಾಗ್ರಹ ಜಾಥಾ ನಡೆಸಿದರು.
ಪ್ರತಿಭಟನಾ ನಿರತರು ಈಗ ಅಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ‘ಕೆಲವರು ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ಯಾವುದೇ ದಾಖಲೆಗಳಿಲ್ಲದೆ, ನಿರಂತರವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದು, ಇದರಿಂದ ಕ್ಷೇತ್ರದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದರಿಂದಾಗಿ ಈಗಾಗಲೇ ಸಮಾಜದಲ್ಲಿ ಎರಡು ಬಣಗಳು ನಿರ್ಮಾಣವಾಗುವ ಲಕ್ಷಣ ಗೋಚರಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್, ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ರಾಘವೇಂದ್ರ ಪಾನಘಂಟಿ, ರಾಧಾ ಕುಲಕರ್ಣಿ, ವೇಣುಗೋಪಾಲ್ ಸಿಂಗ್, ನಗರಸಭೆ ಸದಸ್ಯರಾದ ಅಕ್ಬರ್ ಪಾಷಾ ಪಲ್ಟನ್, ಬಸಯ್ಯ ಹಿರೇಮಠ, ಲತಾ ಚಿನ್ನೂರು, ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಹ್ಯಾಟಿ, ಚಂದ್ರು ಉಂಕಿ, ಗ್ರಾ.ಪಂ. ಸದಸ್ಯರಾದ ಜಗದೀಶ ಚಿನ್ನೂರು, ನಿಂಗಪ್ಪ ಮೇಟಿ, ಶರಣಪ್ಪ ಮತ್ತೂರು, ಮಲ್ಲಪ್ಪ ದೇವರಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ನಗರದ ಈಶ್ವರ ದೇವಸ್ಥಾನದಿಂದ ಆರಂಭವಾದ ಜನಾಗ್ರಹ ಜಾಥಾ ಅಶೋಕ ವೃತ್ತ, ಹೊಸಪೇಟೆ ರಸ್ತೆಯ ಮೂಲಕ ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನದ ತನಕ ಸಾಗಿತು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
‘ಪ್ರಗತಿಪರರ ಸೋಗಿನಲ್ಲಿರುವವರಿಂದ ವಿವಾದ’
ಕೊಪ್ಪಳ: ‘ಧರ್ಮಸ್ಥಳ ಸಂಸ್ಥೆ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೂ ವಿನಾಕಾರಣ ಆಪಾದನೆ ಮಾಡಲಾಗುತ್ತಿದೆ. ಇನ್ನು ಮುಂದೆ ಇದನ್ನು ಸಹಿಸಲು ಆಗುವುದಿಲ್ಲ. ಪ್ರಗತಿಪರರ ಸೋಗಿನಲ್ಲಿರುವವರು ವಿವಾದ ಸೃಷ್ಟಿ ಮಾಡಿ ಧರ್ಮಸ್ಥಳ ಸಂಸ್ಥೆಯ ಹೆಸರು ಹಾಳು ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ ಬಸವರಾಜ ಕ್ಯಾವಟರ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಎಷ್ಟೇ ಅಗೆದರೂ ಯಾವುದೇ ಹೆಣ ಸಿಗುವುದಿಲ್ಲ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸಮರ್ಪಕವಾಗಿ ಪರಿಶೀಲಿಸದೇ ಆತುರದಲ್ಲಿ ಎಸ್‌ಐಟಿ ರಚನೆ ಮಾಡಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.